Thursday, November 25, 2010

ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ, ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ..

     ನೆಪಕ್ಕೆ ಎಡೆ ಇಲ್ಲದಂತಹ ವಿಶೇಷ ಸಂದರ್ಭ. ಇದರ ಆಚರಣೆ ಬಗ್ಗೆಯೂ ಸಂಪ್ರದಾಯವಾದಿಗಳ, ಕಟ್ಟರ್ ದೇಶಪ್ರೇಮಿಗಳ ತಕರಾರು ಇದ್ದೀತು. ಆದ್ರೆ ನನಗ್ಯಾಕೋ ಈ ಆಚರಣೆ ತುಂಬಾ ಹಿಡಿಸಿರೋದ್ರಿಂದ ಪಾಲ್ಗೊಳ್ಳುವ ಸಂಭ್ರಮ! ಈಗಿರುವ ಕಂಪೆನಿಗೆ ಕಾಲಿಡುವ ಮೊದಲು, ನಂಗೆ ಈ ಆಚರಣೆಯ ಗುರುತು, ಪರಿಚಯ ಇರಲಿಲ್ಲ. ಇಲ್ಲಿಗೆ ಬಂದ ಮೇಲೆಯೇ
ತಿಳಿದದ್ದು ನವೆಂಬರ್ ನಾಲ್ಕನೇ ವಾರಾಂತ್ಯದ ವಿಶೇಷ. Yes it is time for thanksgiving...  :-)


     ಧನ್ಯವಾದ ಹೇಳಲಿಕ್ಕೂ ದಿನ ಬೇಕಾ? ಅಂತ ಹಿಡಿಸದವರು ಮೂಗು ಮುರೀಬಹುದು. ಆದ್ರೆ ವರ್ಷಪೂರ್ತಿ ದಿನಂಪ್ರತಿ ಸ್ನಾನ ಮಾಡ್ತಿದ್ರೂ, ಹೇಗೆ ದೀಪಾವಳಿಯಲ್ಲಿ 'ಅಭ್ಯಂಜನ' ಕ್ಕೆಂದೇ ವಿಶೇಷ ಮಹತ್ವ ಇದೆಯೋ, ಹಾಗೆ
ವರ್ಷಾಂತ್ಯದಲ್ಲಿ  ಇದೂ ಕೂಡ ಅಂತ ಭಾವಿಸುವವಳು ನಾನು. ಕೆಲವರು ಹೇಳ್ತಾರೆ 'no thanks and sorry in friendship' ಅಂತ. ಆದ್ರೆ ನಂಗೆ ಇದರಲ್ಲಿ ಸಹಮತವಿಲ್ಲ. ನೆರವಿಗೊಂದು ಧನ್ಯವಾದ, ತಪ್ಪಿಗೊಂದು ಕ್ಷಮಾಪ್ಪಣೆ ಯಾವುದೇ ಸ೦ಬ೦ಧದಲ್ಲಿ ಕ್ಷೇಮಕರ ಅನ್ನೋದು ನನ್ನ ನಂಬಿಕೆ. Thanksgiving ನೆಪದಲ್ಲಿ ಯಾವುದೋ ಗ್ರೀಟಿಂಗ್ ಕಂಪನಿಗೆ ಲಾಭ ಮಾಡುವ ಬದಲು, ಇಡೀ ವರ್ಷದಲ್ಲಿ ನಮಗೆ ನೆರವಾದ, ಪರಿಚಿತ / ಅಪರಿಚಿತ ಮಹಾನೀಯರನ್ನೆಲ್ಲ ಮನತುಂಬಿ ನೆನೆದು ಅವರಿಗೆ ಒಳಿತನ್ನ ಹಾರೈಸುವುದರಲ್ಲಿ ನಿಜಕ್ಕೂ ಒಂಥರಾ ಧನ್ಯತಾ ಭಾವವಿದೆ. ಒಂದಿಡೀ ವರ್ಷದ ಮೆಲುಕು ಹಾಕಿದರೆ ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದವರೆಷ್ಟೋ... ಅದರಲ್ಲಿ ಪರಿಚಯವೇ ಇಲ್ಲದೆ ಅಂತಃಕರಣ ಮಿಡಿದವರೆಷ್ಟೋ...

     ಇಡೀ ವರ್ಷದ ಬುತ್ತಿಯನ್ನ ಬಿಚ್ಚಿದರೆ ಸಾಲು ಸಾಲು ನೆನಪುಗಳ ಮೆರವಣಿಗೆ. ಅದರಲ್ಲೊಂದಷ್ಟು ಸಿಹಿ, ಮತ್ತಷ್ಟು ಕಹಿ. ಕಾಲನ ಬೋಗುಣಿಯಲ್ಲಿ ಸಿಹಿ ಮತ್ತಷ್ಟು ಮಧುರವಾಗಿ, ಕಹಿ ತನ್ನ ಒಗರನ್ನ ಕಳೆದುಕೊಂಡಾಗಲಷ್ಟೇ ಬದುಕು
ಆನಂದಮಯಿಯಾಗೋದು. ಹಾಗಾಗಿ ಬದುಕನ್ನ ಸಂಭ್ರಮಿಸಲಿಕ್ಕೆ ಇಂಥಾ ಆಚರಣೆಗಳು ಸಾಕಷ್ಟು ಕಾರಣಗಳನ್ನ ಒದಗಿಸ್ತಾವೆ. ಅವತ್ತು appraisal  ದಿನ ತುಂಬಾನೇ disturb ಆಗಿದ್ದ ನನ್ನ ಮನಸ್ಸಿಗೆ ಸ್ಪಂದಿಸಿದ ಹಿಂದೆಂದೂ ಸಿಕ್ಕಿರದ, ಮುಂದೆಂದೂ ಕಾಣ ಸಿಗದ cabmet ಮಂಗಳ, ಊರಿಂದ ಮರಳುವಾಗ ಭರ್ಜರಿ ಮಳೆಯಲ್ಲಿ ಸಿಕ್ಕಿ ಕಂಗಾಲಾಗಿ ನಿಂತಿದ್ದಾಗ ತಮ್ಮ ರಿಕ್ಷಾದಲ್ಲಿ lift ಕೊಟ್ಟ ರಾಹುಲ್ ದಂಪತಿಗಳು, ಹುಷಾರಿಲ್ಲದೆ ನರಳುತಿದ್ದಾಗ ತಮ್ಮ ಸಿಹಿ ಸಿಹಿ ಸೀಯಾಳದಿಂದ ತಂಪು ಬೀರಿದ್ದ ಆ 'ಎಳನೀರ ತಾತ', ಯಾವುದೋ ಜ್ಞಾನದಲ್ಲಿ (ಬೇಜವಾಬ್ದಾರಿಗೆ ಪರ್ಯಾಯ ಪದ!) ಹೊಸತಾಗಿ ಕೊಂಡಿದ್ದ ಮೊಬೈಲ್ ನ ಮರೆತು ಬಂದಿದ್ದಾಗ, ಕರೆ ಸ್ವೀಕರಿಸಿ ಪ್ರಾಮಾಣಿಕವಾಗಿ ಹಿಂತಿರುಗಿಸಿದ ಆ ಅಪರಿಚಿತ ಹುಡುಗರು,
ನಾಟಕ ಮುಗಿಸಿ ರಾತ್ರಿ ಹತ್ತೂವರೆಗೆ ಮನೆಗೆ ಮರಳುವಾಗ ಕೈಕೊಟ್ಟ ಗಾಡಿನ ರಿಪೇರಿ ಮಾಡಿಕೊಟ್ಟ ಆ ಆಪತ್ಬಾಂದವ ಆಟೋ ಚಾಲಕ, ಜನರಾಶಿಯಿಂದ ತುಂಬಿ ತುಳುಕುತ್ತಿದ್ದ ಬಸ್ ನಲ್ಲಿ ತಮ್ಮ  ಮಗಳಿಗೆ   half ticket ತಗೊಂಡಿದ್ರೂ ನನಗಾಗಿ ಸೀಟ್ ಬಿಟ್ಟು ಕೊಟ್ಟ ಆ ಕರುಣಾಮಯಿ ತಾಯಿ... ಎಣಿಸುತ್ತಾ ಹೋದರೆ ನೆನಪುಗಳು ಅಸಂಖ್ಯ, ನೆರವುಗಳು ಅಮೂಲ್ಯ. ಇವರ್ಯಾರು ಸ್ನೇಹಿತರಾಗಲಿ, ಸಂಬಂಧಿಕರಾಗಲಿ ಅಲ್ಲ. ಎಲ್ಲವೂ ಆ ಕ್ಷಣದ ನಂಟುಗಳು. ಲೆಕ್ಕಾಚಾರವೇ ಜೀವನವಾಗಿರುವ ಈ ಕಾಲದಲ್ಲಿ, ನಿಸ್ವಾರ್ಥವಾಗಿ ನೆರವಾದ ಇವರೆಲ್ಲರನ್ನ ನೆನೆಸಿಕೊಂಡಾಗ ಬದುಕು ವಿಸ್ಮಯ ಎನ್ನಿಸುತ್ತೆ. ಇಂಥಹ ವಿಸ್ಮಯ, ಧನ್ಯತೆ ಕೊಡಮಾಡಿದ ಆ ಸಜ್ಜನರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು.

     ಇದೆಲ್ಲ ಅಪರಿಚಿತರ ನೆರವಿನ ಮಾತಾಯ್ತು. ಇನ್ನು ಪರಿಚಿತರದ್ದು... ಬೇಡ ಅದಕ್ಕೆ ಅಕ್ಷರದ ಬೇಲಿ,ಆ ಋಣಭಾರ ನನಗೇ ಇರಲಿ. ಆದ್ರೆ ಪಡೆದ ನೆರವುಗಳು ಕಾಲಚಕ್ರದಡಿಯಲ್ಲಿ 'ವಜ್ಜೆಯಾಗಿ' ಪರಿಣಮಿಸದಿರಲಿ ಎ೦ಬುದಷ್ಟೇ ಪ್ರಾರ್ಥನೆ!

ಮತ್ತೊಮ್ಮೆ ನನ್ನೆಲ್ಲ ಬಳಗಕ್ಕೂ ' ಮನಸ್ವೀ ಧನ್ಯವಾದಗಳು'.

ಪ್ರೀತಿಯಿಂದ,

ರಜನಿ.

Saturday, October 30, 2010

ಅಹವಾಲು






ಮುಚ್ಚಿದ ಕಂಗಳ ತುಂಬಾ ಕನಸುಗಳದೇ ಬಿಂಬ
ಜೋಡಿಸಿದ ಕೈಗಳೊಳಗೆ ಬೇಡಿಕೆಗಳ ಪಟ್ಟಿ!
ಮನದಲ್ಲಿ ಮೊಳಗುತಿರಲು ನಿನ್ನದೇ ನಾಮಾಮೃತ
ದೇಹ ಹಿಡಿಯಾಗಿದೆ ಭಕ್ತಿ ಭಾವದಲ್ಲಿ.



ಶೃದ್ದೆ, ಭಕ್ತಿಗಳಿಲ್ಲಿ ಮೇಳೈಸಿ ಮೆರೆಯುತಿದೆ
ನಂಬಿಕೆಯಲ್ಲಷ್ಟೇ ಕೊಂಚ ಕೊರತೆ!
ಈಗೇನಿದ್ದರೂ ಪೂಜಾರ್ಚನೆಯ ಮುಂಗಡ ಪಾವತಿಯಷ್ಟೇ
ಕಾರ್ಯ ಕೈಗೂಡಿದಾಗ ತೀರಿಸುವರಂತೆ ಹರಕೆ!



ತಪ್ಪು ಅವರದಲ್ಲ ಬಿಡು ನಿನ್ನದೇ ಭಕ್ತರು
ನಿನ್ನಂತೆಯೇ ಲೆಕ್ಕಾಚಾರದಲ್ಲಿ ಬಹಳ ಪಕ್ಕ,
ಕರ್ಮಫಲ ಕುರಿತಾಗಿ ನೀ ಕಟ್ಟುನಿಟ್ಟಿದ್ದಂತೆ
ಹರಕೆ ತೀರಿಸುವುದರಲ್ಲಿ ಅವರಿರುವುದು ತಪ್ಪಾ?



ಸರಿಸಿ ಬಿಟ್ಟು ಪಕ್ಕಕ್ಕೀ ಲೆಕ್ಕಾಚಾರಗಳನೆಲ್ಲ
ಹರಸಲಾಗದೆ ನೀನಿವರನು ಈ ಕ್ಷಣದಲಿ...
ಹೂ ಉದುರಿಸಿದರೂ ಸೈ, ಗಂಟೆ ಮೊಳಗಿಸಿದರೂ ಸೈ
ಹಗುರಾದೀತು ಜೀವ ಧನ್ಯ ಭಾವದಲ್ಲಿ!





Saturday, September 11, 2010

ವಂದಿಪೆ ನಿನಗೆ ಗಣನಾಥ...

          ಎಷ್ಟೆಲ್ಲಾ ವಿಚಾರಗಳು... ಚರ್ಚೆಗಳು... ಬರಿಯದೆ ಉಳಿಯಲು ನೂರೆಂಟು ನೆಪ. ಇಷ್ಟು ವರ್ಷಗಳ ಜಡ್ಡು, ಹಾಗೆಲ್ಲ ಏಕ್ ದಂ ಕರಗಿ ಹೋಗೋದಾದ್ರೂ ಹೇಗೆ ಸಾಧ್ಯ?ಅಡ್ಡಿಲ್ಲ ಅವಸರ ಯಾರಿಗಿದೆ? ನಿಧಾನಕ್ಕೆ ನಡಿಯಲಿ ಸುಧಾರಣ ಪರ್ವ ಅಂತ ನಂಗೆ ನಾನೇ ಸಮಾಧಾನ ಹೇಳ್ಕೊಳ್ತಾನೆ ಮತ್ತೊಂದು ಪ್ರಯತ್ನ.

          ಈ ಬಾರಿನು ಯಾಕೋ ಅಮ್ಮ, ಮಗ ಒಟ್ಟಿಗೆ ಬಂದಿದ್ದಾರೆ, ಅದೂ ವಾರಾಂತ್ಯದಲ್ಲಿ! ಹಬ್ಬದ ಸಂಭ್ರಮದ ಜೊತೆಗೆ ತಪ್ಪಿ ಹೋದ ರಜೆಗೆ ಶಪಿಸ್ತಾನೆ ಎಲ್ಲರಿಗು ಹಬ್ಬದ ಗಡಿಬಿಡಿ. ಬೆಲೆ ಏರಿಕೆ ಮತ್ತೇನೆ ಇರಲಿ, ಹಬ್ಬದ ಆಚರಣೆಯಲ್ಲಿ ನಮ್ಮ ಜನ ಆಸ್ಥೆ ಕಳೆದುಕೊಳ್ಳದೆ ಸಂಭ್ರಮಿಸೋದು ನೋಡಿದಾಗ ನಿಜಕ್ಕೂ ಖುಷಿ ಆಗುತ್ತೆ. ಮೊದಲೆಲ್ಲ ಅಪ್ಪ ಅವರ ಕಾಲದ ಬೆಲೆಗಳ ಪಟ್ಟಿ ಹೇಳಿದಾಗ ಯಾವುದೋ ಪುರಾಣ ಕಾಲಕ್ಕೆ ಭೇಟಿ ಕೊಟ್ಟಂತೆ ಆಗ್ತಿತ್ತು. ಈಗ ನಾವು ಕಂಡ ಬೆಲೆಗಳು ನಮ್ಮ ಕಣ್ಣೆದುರೇ ಇತಿಹಾಸ ಆಗಿದೆ! ಈಗ ಅಪ್ಪನ ಜೊತೆ ನಾನೂ ಧ್ವನಿ ಸೇರಿಸಿ ಹೇಳ್ತಿರ್ತೀನಿ 'ನಾನೂ ಕಂಡ ಹಾಗೆ...' ಅಂತ! ನಿಜ ಹೇಳ್ಬೇಕು ಅಂದ್ರೆ ಈಗ ಎಲ್ಲ ಹಬ್ಬಗಳು ಕೇವಲ ಮಧ್ಯಾನದ ಭೂರಿ ಭೋಜನಕ್ಕಷ್ಟೇ (ಅದೂ ಅಮ್ಮ ಮಾಡಿ ಬಡಿಸೋದ್ರಿಂದ) ಸೀಮಿತ ಆಗಿದೆ. ದೇವರು 'ಸರ್ವಾಂತರ್ಯಾಮಿ' ಅನ್ನೋ ನಂಬಿಕೆಗೆ ಮನಸ್ಸು ಗಟ್ಟಿಯಾಗಿ ಆತು ಕೊಂಡ ಮೇಲೆ, ದೇವಸ್ಥಾನ ಭೇಟಿ ಆ ಪರಿ compulsory ಅನ್ನಿಸಲ್ಲ. ಹಬ್ಬದ ದಿನ ಮೈಲುಗಟ್ಟಲೆ ಸಾಲಿನಲ್ಲಿ ನಿಂತು, ಸೆಕೆಂಡ್ ಲೆಕ್ಕದಲ್ಲಿ ದೇವರ ದರ್ಶನ ಮಾಡಿ ಬರೋ ಬದಲು, ಆ ಗೌಜು, ಗಲಾಟೆ ಇಲ್ಲದ ದಿನ ಹೋಗಿ ಆ ಪ್ರಶಾಂತಿ ವಾತಾವರಣದಲ್ಲಿ ಗಂಟೆಗಟ್ಟಲೆ ತಣ್ಣಗೆ ಕೂತು ಬರೋದು ಯಾಕೋ ಆಪ್ಯಾಯಮಾನ ಅನ್ನಿಸುತ್ತೆ. ಉಳಿದಂತೆ ಹೊಸ ಬಟ್ಟೆನೂ ( ಅಪ್ಪಿ ತಪ್ಪಿ ಟೈಲರಪ್ಪ ಸರಿಯಾದ ಸಮಯಕ್ಕೆ ಕೊಟ್ಟ ಅನ್ನೋ ಕಟ್ಟ ಕಡೆಯ ಸಾಧ್ಯತೆಯ ಲೆಕ್ಕದಲ್ಲಿ ಹೇಳೋದಾದ್ರೆ) ಮೊದಲಿನ ಜೋಷ್ ಕೊಡಲ್ಲ. ಒಟ್ಟಿನಲ್ಲಿ ಈಗ ಹಬ್ಬ ಅಂದ್ರೆ ಮತ್ತೊಂದು ಸಿನಿಮಾ, ಮತ್ತೊಂದು ಪುಸ್ತಕ, ಮತ್ತೊಂದು ಸೋಂಬೇರಿ ನಿದ್ದೆ, ಒಂದಷ್ಟು phone calls… ಅಷ್ಟೇ.

          'ನಮ್ಮ ಕಾಲದಲ್ಲಿ..' ಪುರಾಣನ ಮುಂದುವರಿಸೋದಾದ್ರೆ ಆಗಿನ ಗಣಪತಿ ಹಬ್ಬದ ಮಜಾನೆ ಬೇರೆ. ಎರಡು ಬೀದಿಯ ಮಕ್ಕಳು ಸೇರಿದರೆ ಕಡಿಮೆ ಅಂದ್ರು ಇಪ್ಪತ್ತಕ್ಕೆ ಕಮ್ಮಿ ಇರಲಿಲ್ಲ ನಮ್ಮ ಜನಸಂಖ್ಯೆ. ಇದರಲ್ಲೂ ಮೂರು ಜನ ಮಹಾಮಾತೆಯರ, ನಾವು ಒಂಭತ್ತು ಮಕ್ಕಳದ್ದು ಒಂಥರಾ ಪ್ರತ್ಯೇಕ identity. ಹಬ್ಬದ ದಿನನೂ ನಮ್ಮದು uniform ಡ್ರೆಸ್ಸೇ! ಸಂಕ್ರಾಂತಿ, ಉಗಾದಿ, ಗಣಪತಿ/ ದೀಪಾವಳಿ (ಎರಡರಲ್ಲಿ ಒಂದಕ್ಕೆ ಮಾತ್ರ) ಹಬ್ಬ ಬರೋ ಹಾಗಿಲ್ಲ, ಮೂರು ಮಹಿಳಾ ಮಣಿಗಳು ಒಟ್ಟಿಗೆ ಹೋಗಿ ಥಾನು ಲೆಕ್ಕದ ಬಟ್ಟೆನ, ಮೀಟರ್ ಗಟ್ಟಲೆ ಹರಿಸಿ ತಂದು, ದೊಡ್ಡವರಿಗೆಲ್ಲ ಚೂಡಿದಾರ್, ಚಿಕ್ಕವರಿಗೆಲ್ಲ ಫ್ರಾಕ್ / ಲಂಗ ಬ್ಲೌಸ್ ಹೋಲಿಸಿ ಸಾರ್ಥಕ ಪಡ್ಕೊಳ್ತಿದ್ರು.ಸಧ್ಯ ದೇವರ ದಯೆಯಿಂದ ನಮ್ಮ ಹುಟ್ಟಿದ ದಿನಗಳು ಇಡೀ ವರ್ಷದಾದ್ಯಂತ ಚದುರಿ ಹೋಗಿದ್ರಿಂದಲೋ ಅಥವಾ ಅದಕ್ಕೂ wholesale ಆಗಿಯೇ ಬಟ್ಟೆ ತಂದು, ಹುಟ್ಟಿದ ದಿನ ಬಂದ ಸಂದರ್ಭದಲ್ಲಿ ಹೊಲೆಸೋ ಡಬ್ಬಾತಿಡಬ್ಬ idea ನಮ್ಮ ಅಮ್ಮಂದಿರಿಗೆ ಬರದಿದ್ದ ಕಾರಣಕ್ಕೋ ಕೇವಲ happy birthday ಗೆ ಮಾತ್ರ ನಮಗೆ ನಿಜವಾದ color dressನ ಖುಷಿ ಸಿಗ್ತಿದ್ದದ್ದು. ನಮ್ಮೀ ಒಂಭತ್ತು ಜನ ಮಕ್ಕಳಲ್ಲೇ ಎರಡು ಗುಂಪಿತ್ತು . ನಮ್ಮ ಗುಂಪಿನ ಅಧಿನಾಯಕಿ ನನ್ನ ಹಿರಿಯಕ್ಕ. ಸಂಕ್ರಾಂತಿ ಹಾಗೂ ಗಣಪತಿ ಹಬ್ಬದಲ್ಲಿ ನಾವು ಮನೆ ಹೊಕ್ಕುತ್ತಿದ್ದದೇನಿದ್ರು upload/download ಕೆಲಸಗಳಿಗೆ ಮಾತ್ರ! ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಬೆಲ್ಲ ಬೀರಿ, ದನ ಕಿಚಾಯಿಸೋ ಸಂಭ್ರಮ ಆದ್ರೆ, ಗಣಪತಿ ಹಬ್ಬದಲ್ಲಿ ಯಾರು ಜಾಸ್ತಿ ಗಣಪತಿ ಮೂರ್ತಿನ ನೋಡ್ತಾರೆ? ಅನ್ನೋ competition. ಮಧ್ಯಾನ ಊಟ ಮುಗೀತಿದ್ದ ಹಾಗೆ ಅಮ್ಮನಿಗೆ ನಮ್ಮನ್ನ ಅಲಂಕರಿಸೋ ಮಹಾನ್ ಜವಾಬ್ದಾರಿ. ನನಗೋ ಜಡೆನ ಎಷ್ಟೇ ಬಿಗಿಯಾಗಿ ಬಿಗಿದರೂ ಸಮಾಧಾನ ಇಲ್ಲ. ನನ್ನ ಕಣ್ಣೀರು, ಕೂಗಾಟ ನೋಡಿ ಕಡೆಗೆ ಅಮ್ಮ ಥೇಟ್ ಮಜ್ಜಿಗೆ ಕಡಿವಾಗ ತಪ್ಪಲೆನ ಪಾದಗಳಲ್ಲಿ ಬಂಧಿಸೋ ಹಾಗೆ ನನ್ನ ಸೊಂಟನ ಬಂಧಿಸಿ, ತಮ್ಮ ಅಷ್ಟೂ ಶಕ್ತಿ ವಿನಿಯೋಗಿಸಿ ಎಳೀತಿದ್ರು. ನಾಲ್ಕು ಗಂಟೆಗೆಲ್ಲ ಅಕ್ಷತೆ ಕರಡಿಕೆ ಹಿಡ್ಕೊಂಡು ನಮ್ಮ ಸವಾರಿ ಸಿದ್ಧ ಆಗ್ಬಿಡ್ತಿತ್ತು. ಆಗಿನ ದಿನಗಳನ್ನ ನೆನಿಸಿಕೊಂಡಾಗ ನಿಜಕ್ಕೂ ಪುಳಕ ಆಗುತ್ತೆ. ಗುರುತು, ಪರಿಚಯ ಏನೂ ಬೇಕಿರಲಿಲ್ಲ ನಮಗೆ. 'ಆಂಟಿ ನಿಮ್ಮನೇಲಿ ಗಣೇಶ ಕೂರಿಸಿದೀರ?' ಅಂತ ಕೇಳೋದು, ಹೌದಾದ್ರೆ ಒಳ ನುಗ್ಗೋದು... ಕೆಲವರಿಗೆ ಪ್ರೀತಿ ಉಕ್ಕಿ ನಮಗೂ ತಾಂಬೂಲ ಕೊಟ್ರೆ , ಉಳಿದವರದ್ದು ಮುಖದ ತುಂಬಾ ಮಂದಹಾಸ. ರಾತ್ರಿ ಊಟಕ್ಕೆ ಮುಂಚೆ ನಾವು ಚಿಲ್ಟಾರಿಗಳೆಲ್ಲ ಒಂದು ಸಣ್ಣ meeting ಮಾಡಿ, ನಾವು ನೋಡಿದ ಗಣಪತಿಗಳ, ನಮಗೆ ಸಿಕ್ಕ ಆತಿಥ್ಯಗಳ ಬಗ್ಗೆ ಕೊಚ್ಚುತ್ತಿದ್ದ ಪ್ರತಾಪಕ್ಕೆ ಕೆಲವೊಮ್ಮೆ ಸಾಧ್ಯತೆ/ಬಾಧ್ಯತೆಗಳ ಹಂಗೇ ಇರ್ತಿರ್ಲಿಲ್ಲ. ಕೂ....ಚುಕುಬುಕು ಚುಕುಬುಕು....

          ಇನ್ನು ಶಿವರಾತ್ರಿ ಬಿಟ್ಟರೆ VCP ವೀಕ್ಷಣೆಗೆ ಅವಕಾಶ ಕುದುರಿ ಬರ್ತಿದ್ದದ್ದು ಗಣಪತಿ ಹಬ್ಬದಲ್ಲೇ. ವಾಹ್! ನಿಜಕ್ಕೂ ಚೆಂದನೆಯ ಅನುಭವ ಅದು. ಅಪ್ಪ, ಅಮ್ಮನ್ನ ಹೇಗಾದರೂ ಮಾಡಿ ಪುಸಲಾಯಿಸಿ, ಕೇರಿ ಮಕ್ಕಳ ಕೂಡಿ, ಆ ಚಳಿಚಳಿ ರಾತ್ರಿಯಲ್ಲಿ, ಶಾಮಿಯಾನದ ಅಡಿಯಲ್ಲಿ, ಕಣ್ಣು ಕೆಂಪಾಗಿಸಿಕೊಂಡು (ಅಪ್ಪನ ಮಾತಲ್ಲಿ ಹೇಳೋದಾದ್ರೆ ಬಾಯಿಕಳ್ಕೊಂಡು) ಸಿನಿಮಾ ನೋಡುವುದು... ಒಂಥರಾ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆಯೇ ಸೈ. ಉಫ್ ಒಂದು ಹಬ್ಬದ ಹಿಂದೆ ಎಷ್ಟೆಲ್ಲಾ ಹಳೆ/ ಹೊಸ ನೆನಪುಗಳು... ಬಾಲ್ಯದ ಆ ನೆನಪುಗಳ ಜೊತೆಗೆ ಈಗ ಏಳು ವರ್ಷಗಳ ಹಿಂದೆ ಇದೇ ಗೌರೀ ಹಬ್ಬದ ಹಿಂದಿನ ತಾನೇ ಪರಿಚಯ ಆದ ಅವನು... ಈಗ ಎರಡು ವರ್ಷಗಳ ಹಿಂದೆ ಆಫೀಸಿನಲ್ಲಿ HR ಗಳನ್ನ ಎದುರು ಹಾಕಿ ಕೊಂಡು ನಾವು ಆಚರಿಸಿ ಸಂಭ್ರಮಿಸಿದ ಪರಿ... ಎಲ್ಲವೂ ಈಗಷ್ಟೇ ನಡೆದಂತಿದೆ.


          ಈಗಾಗಲೇ ಮುಕ್ತತೆಯ ನೆಪದಲ್ಲಿ ನಮ್ಮೆಲ್ಲ ಬಧ್ಧತೆಗಳನ್ನ ಗಾಳಿಗೆ ತೋರಿರುವ ನಾವು, ಗಣಪತಿಗೆ ತೋಚಿದ ಆಕಾರ ಕೊಟ್ಟು ಮನೆಯ ಅಲಂಕಾರ ಸಾಮಗ್ರಿ ಕೂಡ ಮಾಡಿಬಿಟ್ಟಿದ್ದೀವಿ. ಆದ್ರೆ ಡೊಳ್ಳು ಹೊಟ್ಟೆಯ ನಮ್ಮ ಗಣಪ ತನ್ನ structure ಮೂಲಕನೆ ನಮಗೆ ಎಷ್ಟೆಲ್ಲಾ ವ್ಯಕ್ತಿತ್ವದ ಪಾಠ ಹೇಳ್ತಾನೆ ಅನ್ನೋದನ್ನ ನೋಡಿದಾಗ ನಿಜಕ್ಕೂ ಅಚ್ಚರಿ ಆಗುತ್ತೆ. (ಚಿತ್ರ ನೋಡಿ ತಿಳಿಯಬಹುದು). ನಮ್ಮ ಪೂಜೆ ಆಚರಣೆಗಳು ಕೇವಲ ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗದೆ, ಕಲಿಕೆಗೂ ದಾರಿ ಮಾಡಿಕೊಡಲಿ ಅನ್ನುವ ಆಶಯದೊಂದಿಗೆ, ಎಲ್ಲರಿಗೂ ಗೌರೀ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.



Monday, July 26, 2010

ಮಾಫಿ ಸಿಕ್ಕೀತೆ ನಮ್ಮ ಮೈಮರೆವಿಗೆ...

         
          ಇದನ್ನ ಏನಂತ ಅರ್ಥೈಸ್ಕೋಬೇಕು ಅಂತಾನೆ ತಿಳೀತಿಲ್ಲ. 'ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ' ಅನ್ನುವ ಭಂಡತನ ಅಂತನೋ? ಅಥವಾ ಧೂಳಿನಿಂದ ಎದ್ದು ಬರುವ finixisam ಅಂತನೋ? ಗೊತ್ತಾಗ್ತಿಲ್ಲ. ಮೂರು ವಾರಗಳ ನಂತರ ಊರಿನ ಬಸ್ ಹತ್ತಿ ಕಿಟಕಿಯಾಚೆಗೆ ಕಣ್ಣಿಟ್ಟು ಕುಳಿತಾಗ, ಬಿಡದಿ ಹತ್ತಿರ ಬರುತ್ತಿದ್ದಂತೆ ಒಂಥರಾ ತಣ್ಣನೆಯ ಶಾಕ್. ಪ್ರಣಯಕಲಾ ಪ್ರವೀಣ, ರಾಸಲೀಲ ಸಾರ್ವಭೌಮ, socalled ಸ್ವಾಮೀಜಿ ನಿತ್ಯಾನಂದ ತನ್ನ 'ಅಡ್ಡ' ನಿತ್ಯಾನಂದ ಧ್ಯಾನ ಪೀಠದಲ್ಲಿ 'ಗುರುಪೂರ್ಣಿಮ ಜಯಂತಿ'ಗೆ ಸಾರ್ವಜನಿಕರೆಲ್ಲರಿಗೂ ಆ(ಹಾ!)ದರದ ಸ್ವಾಗತ ಕೋರುತ್ತ ತನ್ನ ಎಂದಿನ close up ನಗುವಿನಲ್ಲಿ ರಸ್ತೆ ಇಡೀ ರಾರಾಜಿಸ್ತಿದ್ದ! ದಂಗಾದೆ, ಆಶ್ಚರ್ಯ ಚಕಿತಳಾದೆ, ಅಚ್ಚರಿಗೊಳಗಾದೆ... ಇದರ ಸಮಾನಾರ್ಥಕ ಜೊತೆಗಾರ ಪದಗಳಷ್ಟನ್ನೂ ಬೇಕಾದರೆ ಸೇರಿಸಿಕೊಳ್ಳಿ. ಯಾಕಂದರೆ ನನ್ನ ಮಟ್ಟಿಗದು ಆ ಪರಿ ಅನಿರೀಕ್ಷಿತ ಮತ್ತು ನನ್ನನ್ನದು ಪೂರ್ತಿ stun ಮಾಡ್ಬಿಟಿತ್ತು .

          ಇದಲ್ವಾ guts ಅಂದ್ರೆ? ಬದುಕಿನ ಸಣ್ಣ ಪುಟ್ಟ ಸೋಲಿಗೂ, ನಿರಾಸೆಗೂ ಇನ್ನಿಲ್ಲದಂತೆ ಒದ್ದಾಡಿ, ಪರಿಚಿತರ ಕಣ್ಣಿನಿಂದ, ಆಪ್ತೆಷ್ಟರ ಪ್ರಶ್ನಾವಳಿಯಿಂದ ತಪ್ಪಿಸಿಕೊಂಡು ಓಡಾಡಲು ಎಷ್ಟೆಲ್ಲಾ ಪಾಡು ಪಡ್ತೀವಲ್ವಾ ನಾವು ಸಾಮಾನ್ಯ ಜನತೆ ? ಆದ್ರೆ ಈ ಮಹಾಶಯ? ಭಳಿರೆ! ಪರ ರಾಜ್ಯದ ವ್ಯಕ್ತಿ ಒಬ್ಬ ನಮ್ಮ ನಾಡಿನಲ್ಲಿ ನೆಲೆ ನಿಂತು ಈ ಪರಿ ಮನ್ಮಾನಿ ಮಾಡೋದು ಅಂದ್ರೆ ಸಾಮಾನ್ಯದ ಮಾತಾ? ಅವನ ಬೆನ್ನ ಹಿಂದೆ ಯಾರೇ ಇರಬಹುದು, ಯಾರೇ ಅವನೆಡೆಗೆ ಅಭಯ ಹಸ್ತ ಚಾಚಿರಬಹುದು. ಆದ್ರೆ ಸಾರ್ವಜನಿಕರೆದುರಿಗೆ ಬಂದು, ಅವರ ಕಣ್ಣಿಗೆ ಕಣ್ಣು ಕೂಡಿಸಬೇಕಾದವನು ಇವನೇ ಅಲ್ವ? ಒಂದಿನಿತು ತಳಮಳ, ನಾಚಿಕೆ ಕಾಡಲಿಕ್ಕೆ ಇಲ್ವಾ ಅವನಿಗೆ? ನಿಜಕ್ಕೂ ಅಚ್ಚರಿ ಅನ್ನಿಸ್ತಿದೆ. ನಮ್ಮ ಮಾಮೂಲಿ ಸಿನಿಕತನದೊ೦ದಿಗೆ ಏನೇ ಜರಿದು, ಹೀನೈಸಿ ಅಸಮಧಾನನ ತಣ್ಣಗಾಗಿಸಿ ಕೊಳ್ಳಬಹುದು. ಆದ್ರೂ… ಈ ಕ್ಷಣಕ್ಕೂ ಅವನ ಭ೦ಡತನದೆಡೆಗೆ ನಂದು ಕಣ್ಣರಳಿಸಿದ ನೋಟ.

          ಇದೇ ಗು೦ಗಿನಲ್ಲಿ ಪ್ರಯಾಣ ಮುಂದುವರೆಸುತ್ತಿದ್ದಂತೆ ನನ್ನ ಕಾಲೇಜು ದಿನಗಳ ನೆನಪುಗಳು ಮರುಕಳಿಸಲಾರ೦ಬಿಸಿತು. ನನ್ನ ಡಿಗ್ರಿ ಎರಡನೆ ವರ್ಷದ ದಿನಗಳವು. ABVP ಯ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಅವನನ್ನು ನೋಡಿದ್ದು. ಬಿಳಿ ಪಂಚೆಯೊಂದನ್ನು ಉಟ್ಟು, ಅಂತದ್ದೇ ಒಂದು ಪಂಚೆನ ಮೈ ಮೇಲೆ ಹೊದ್ದು, ದೇಶಭಕ್ತಿ ಜಾಗೃತಿಯ ಸಂದೇಶನ ತನ್ನ ಜಾದೂ ಕಲೆಯ ಮೂಲಕ ಪ್ರದರ್ಶಿಸುತ್ತಾ, ಜೀವಂತ ಆದರ್ಶದಂತೆ ಭಾಸವಾಗಿದ್ದ ನಮಗೆಲ್ಲ, ಜಾದೂಗಾರ ಜಗನ್ನಾಥ್! ಅದೆ೦ಥಾ ದೇಶಾಭಿಮಾನದ ಮಾತುಗಳು ಅ೦ತೀರಿ? ಈ ಕ್ಷಣಕ್ಕೆ ನೀವು ಕಾಶ್ಮೀರದ ಗಡಿಯಲ್ಲಿ ಹೋಗಿ ನಿಲ್ಲಲ್ಲು ಸನ್ನದ್ದರಾಗಿ ಬಿಡಬೇಕು, ಆ ಪರಿ ಆವೇಶ ಉಕ್ಕಿ ಬರುವ೦ತಾ ಮಾತುಗಳವು. ತನ್ನದೇ ಅನಾಥಾಶ್ರಮವೊಂದನ್ನು ನಡೆಸುತ್ತಿದ್ದ ಪುಣ್ಯಾತ್ಮ 'ನಿಮ್ಮ ಮನೆ ಸುತ್ತಾನೋ, ಹಾದಿ ಬದಿಯಲ್ಲೋ ಯಾರಾದ್ರು ಅನಾಥ ಮಕ್ಕಳನ್ನ ಕಂಡ್ರೆ ನನಗೆ ತಿಳಿಸಿ, ನಾನೇ ಖುದ್ದಾಗಿ ಬಂದು ಕರ್ಕೊಂಡು ಹೋಗ್ತೀನಿ. ನಿಮ್ಮದೇನಿದ್ರು ಎಂಟಾಣಿ postcard ಖರ್ಚು, ಉಳಿದಿದ್ದೆಲ್ಲ ನಂದೇ' ಅಂದಾಗ ನಮ್ಮೆಲ್ಲರ ಕಣ್ಣಿಗೆ 'ಸೇವಾಮೂರ್ತಿ' ಯಂತೆ ಗೋಚರಿಸಿದ್ದ. ಸುಭಾಷ್ ಚಂದ್ರ ಭೋಸರ ಹೇಳಿಕೆಯನ್ನ ಸ್ವಲ್ಪ twist ಮಾಡಿ 'ನಂಗೆ ಅನಾಥಮಕ್ಕಳನ್ನ ಕೊಡಿ, ನಾನು ನಿಮಗೆ ಸ್ವಸ್ಥ ಸಮಾಜ ಕೊಡ್ತೀನಿ' ಅನ್ನೋ punch line ಬೇರೆ! ತು೦ಬಾನೇ impress ಆಗಿ ಹೋಗಿದ್ವಿ ನಾವೆಲ್ಲ. ನನಗಾಗ ತಕ್ಷಣಕ್ಕೆ ನೆನಪಾಗಿದ್ದು ನಮ್ಮನೆ toilet clean ಮಾಡಲು ಬರ್ತಿದ್ದ 'ಸ್ಲಂ ಬಾಲ'. ಮುಂದಿನ ಬಾರಿ ಅವನು ಬಂದಾಗ ಇದೇ ಉದ್ದೇಶದಿಂದ ಅವನ ಪೂರ್ವಾಪರ ವಿಚಾರಿಸಿದ್ದೆ ಕೂಡ. ಆದ್ರೆ ಮನೆಯವರೆಲ್ಲ ನನ್ನ ವಿಚಾರಣೆನ ತಮಾಷೆ ಮಾಡಿ ನಕ್ಕಾಗ ನಮ್ಮನೇಲಿ ಸಮಾಜ ಸೇವೆಗೆ ಎನ್ಕರೇಜೆ ಮಾಡಲ್ಲ ಅಂತ ಬಡಬಡಿಸುತ್ತ ಸುಮ್ಮನಾಗಿದ್ದೆ.

          ಆದರೆ ಇದೇ ಅಭಿಮಾನ ಧಾರೆಯೊಂದಿಗೆ ಎರಡನೇ ಬಾರಿಗೆ ಅವನ ಕಾರ್ಯಕ್ರಮಕ್ಕೆ ಹಾಜಾರಾದಾಗ, ಅದೇ ಮೊನಚು ಮಾತು, ವಿಶಾದಭರಿತ ಸತ್ಯಗಳನ್ನ ಪುನರುಚ್ಚರಿಸುತ್ತಾ ಅತಿಯಾದ ಸ್ವಪ್ರಶಂಸೆಯಲ್ಲೇ ಮುಳುಗಿ ಹೋಗಿ ಯಾಕೊ ಖಾಲಿ ಖಾಲಿಯಾದ೦ತೆ ಅನ್ನಿಸಿದ್ದ. ಅವನ ನಡವಳಿಕೆಗಳಲ್ಲಿ ಸಹಜತೆಗಿಂತ over acting ಅಂಶಗಳೇ ಹೆಚ್ಚಾಗಿ ಕಂಡಂತಾಗಿ ನಮ್ಮ ಅಭಿಮಾನದ ಬಲೂನು ಸದ್ದಿಲ್ಲದ್ದೆ ಗಾಳಿ ಕಳೆದುಕೊಂಡಿತ್ತು. ಆದ್ರೆ ನನ್ನ ಬಹುತೇಕ ಸ್ನೇಹಿತರು ಇನ್ನೂ 'ಜಾದು ನಶೆಯಲ್ಲೇ' ಮುಳುಗಿ ಹೋಗಿದ್ರಿಂದ, ಕಡೆಯ ವರ್ಷದ ಶಾರದ ಪೂಜೆಯಲ್ಲಿ contribution ಅಂತ ಒಟ್ಟಾದ ಹಣದ ಒಂದು ಭಾಗವನ್ನು ಜಗನ್ನಾಥ್ ಸಾಹೇಬ್ರಿಗೆ ಕೊಡುವುದೆಂದು ತೀರ್ಮಾನ ಆಯ್ತು. ಇದರ ಬಗ್ಗೆ ಆಕ್ಷೇಪ ಎತ್ತಿದ್ದ ನಾನು, ಸ್ನೇಹಿತನೊಬ್ಬನ ಕೆಂಗಣ್ಣಿಗೆ ಸಮಾಜ ಸೇವೆಗೆ ಅಡ್ಡಗಾಲು ಹಾಕೋ 'ದೇಶದ್ರೋಹಿ' ತರ ಕಂಡಿದ್ದೆ! ಅವತ್ತು ಶಾರದಾ ಪೂಜೆಯ ದಿನ ಸಾಹೇಬರು ತಮ್ಮ ಜೊತೆ ನಾಲ್ಕು ಪುಟಾಣಿಗಳನ್ನೂ ಕರೆತಂದಿದ್ರು. ಎಲ್ಲರೂ ಹತ್ತು ವರ್ಷದ ಒಳಗಿನ ಹೆಣ್ಣು ಮಕ್ಕಳೇ ಇದ್ದರೆಂಬ ನೆನಪು. ಆದ್ರೆ ಅವರಿದ್ದ ಸ್ಥಿತಿ ಮಾತ್ರ ತುಂಬಾ ದಯಾನೀಯವಾಗಿತ್ತು. ಯಾಕೋ ಉತ್ತಮ ವಾತಾವರಣದ ಮಕ್ಕಳಲ್ಲಿರುವ ಪ್ರಶಾಂತತೆ, ಮುಗ್ದತೆ ಆ ಕಣ್ಣುಗಳಲ್ಲಿರಲಿಲ್ಲ. ತುಂಬಾ ಕೊಳಕಾದ ಹರಿದ ಬಟ್ಟೆ, ಕೆದರಿದ ಕೂದಲು, ಕಡೆ ಪಕ್ಷ ಮುಖನು ತೊಳೆಯದೇ ಇದ್ದ ಅವರನ್ನ ನೋಡಿ 'ಎಲ್ಲೊ ಏನೋ ಎಡವಟ್ಟಿದೆ' ಅನೋ ಅನುಮಾನ ನಮ್ಮ ಗುಂಪಿನ ಬಹುತೇಕರಿಗೆ ಪ್ರತ್ಯೇಕವಾಗೆ ಬಂದಿತ್ತು. ತೀರ ಇಸ್ತ್ರಿ ಮಾಡಿದ ಬಟ್ಟೆಯ ನಿರೀಕ್ಷೆ ನಮಗಿಲ್ಲದಿದ್ರು, ಹರಿದ ಬಟ್ಟೆಯನ್ನ ಹೊಲೆದು ಕೊಳ್ಳಲು ಸೂಜಿ-ದಾರ , ಕೆದರಿದ ಕೂದಲನ್ನು ಬಾಚಲು ಬಾಚಣಿಗೆ, ಕಡೆ ಪಕ್ಷ ಮುಖ ತೊಳೆಯಲು ನೀರೂ ಸಿಕ್ಕದಂತ ದರಿದ್ರ ಪರಿಸ್ಥಿತಿಯನ್ನ ಒಪ್ಪಿಕೊಳ್ಳಲು ಮನಸ್ಯಾಕೋ ಸಿದ್ಧವಿರಲಿಲ್ಲ. ಈ ಮುಗ್ಧ ಕಂದಮ್ಮಗಳನ್ನ ಮುಂದಿಟ್ಟುಕೊಂಡು ಹಣ ಮಾಡ್ತಿದಾನಾ ಈ ಪಾಪಿ? ಅನ್ನೋ ಆಕ್ರೋಶ ಭರಿತ ಅನುಮಾನ. ತನ್ನ ಮಾಮೂಲಿ ಗಿಮಿಕ್ ನೊಂದಿಗೆ ಜಾದು ಕಾರ್ಯಕ್ರಮ ಮುಗಿಸಿದ ಮೇಲೆ ಗೌರವ ಸಮರ್ಪಣೆಯ ಸಮಯದಲ್ಲಿ 'ಅಭಿಮಾನಿ ದೇವರುಗಳು' ಹಾರ ಹಾಕಿದರೆ, ತನ್ನ ಮೂವತ್ತೆರಡು ಹಲ್ಲುಗಳನ್ನೂ ಗಿಂಜಿ ಕಟು ವಾಸ್ತವದಲ್ಲೂ ಹಾಸ್ಯಪ್ರಜ್ಞೆ ಮೆರೆವವನಂತೆ 'ದಯವಿಟ್ಟು ಇನ್ಮೇಲೆ ಹೀಗೆ ಹೂವಿನ ಹಾರ ಹಾಕೋ ಬದಲು ನಾಲ್ಕು ನಿಂಬೆಹಣ್ಣು ಕೊಟ್ಬಿಡಿ. ನಾಳೆ ಬೆಳಿಗ್ಗೆ ನನ್ನ ಮಕ್ಕಳಿಗೆ ಚಿತ್ರಾನ್ನ ಮಾಡಿ ಹಾಕ್ಲಿಕ್ಕಾದ್ರು ಆಗುತ್ತೆ' ಅಂದಾಗ ನಮ್ಮೆಲ್ಲರ ಮನಸ್ಸು ಮಿಡಿಯೋ ಬದಲು ಕುದಿದು ಹೋಗಿತ್ತು , ಎಲಾ ಇವನಾ, ಚಿತ್ರಾನ್ನಕ್ಕೆ ಕಡ್ಲೆಬೀಜ ದಿಂದ ಹಿಡಿದು ಕೊತ್ತಂಬರಿ ಸೊಪ್ಪಿನ ತನಕ ಎಲ್ಲಕ್ಕೂ ಸಾಕಾಗುವಷ್ಟು ದುಡ್ಡು ಕೊಟ್ಟಿದೀವಿ ಆದ್ರೂ ತನ್ನ ಒಗ್ಗರಣೆ ಹಾಕೋ ಬುದ್ಧಿ ಬಿಡೋಲ್ವಲ್ಲ ಈ ಪಾರ್ಟಿ ಅಂತ. ಅವನ ಪರ-ವಿರೋಧ ಚರ್ಚೆಗಳು ನಮ್ಮ ಮಧ್ಯೆ ಸುಮಾರು ದಿನಗಳ ತನಕ ನಡೆದಿತ್ತು.

          ನನ್ನ ಡಿಗ್ರೀ ಮುಗಿದು ಸುಮಾರು ಒಂದು ವರ್ಷದ ಆನಂತರದಲ್ಲಿ ಇರಬೇಕು, ಯಾರೊಂದಿಗೋ ಹಣ ಕಾಸು ವಿಚಾರದಲ್ಲಿ ರಗಳೆ ಮಾಡಿಕೊಂಡು ಮೊದಲ ಬಾರಿಗೆ ಅವನ ಒಂದೊಂದೇ ಹಗರಣಗಳ ಪಟ್ಟಿ ಹೊರಕ್ಕೆ ಬಂತು. ಬರೀ ಆಸ್ತಿ, ಹಣಕಾಸಿನ ಹಗರಣ ಆಗಿದ್ದಿದ್ರೆ ನನ್ನನ ಇಷ್ಟು ವರ್ಷಗಳ ನಂತರನೂ ಕಾಡುವಷ್ಟು ತೀವ್ರತೆ ಪಡೆದು ಕೊಳ್ತಿರ್ಲಿಲ್ವೇನೋ. ಆದ್ರೆ ಆ ಎಳೆ ಮಕ್ಕಳೊಂದಿಗೆ ಅವನು ನಡೆದುಕೊಂಡಿದ್ದ ರೀತಿ ನಮ್ಮನ್ನಾ ತುಂಬಾ ತಲ್ಲಣಕ್ಕೆ ದೂಡಿತ್ತು. ಈಗಷ್ಟೇ ಹರೆಯಕ್ಕೆ ಕಾಲಿಡ್ತಿದ್ದ ಹೆಣ್ಣು ಮಕ್ಕಳು ತನ್ನ ಕೈಯಲ್ಲೇ ಸ್ನಾನ ಮಾಡಿಸಿ ಕೊಳ್ಳಬೇಕು ಅನ್ನೋದ್ರಿಂದ ಹಿಡಿದು, ತನ್ನೊಡನೆಯೇ ಮಲಗಬೇಕು ಅನ್ನುವಲ್ಲಿಯವರೆಗೂ! ಎಂಥಾ ಅಮಾನವೀಯ, ಅನಾಗರೀಕ ವರ್ತನೆ... ಅಂದು ಅವನೊಂದಿಗೆ ಬಂದಿದ್ದ ಪಾಪಚ್ಚಿಗಳು ತುಂಬಾ ದಿನದ ತನಕ ನಮ್ಮ ಮನಸನ್ನ ಕಾಡಿದ್ರು. ಆ ಮಕ್ಕಳಾದರು ಎಲ್ಲಿಂದ ಬಂದಿದ್ದರು ಗೊತ್ತೇ? ಬಹುತೇಕರು ಲಡಾಕ್, ಜಮ್ಮು ಮತ್ತು ಕಾಶ್ಮೀರದಿಂದ. ಅಲ್ಲಿಯ ವಿಧ್ವಂಸಕ ವಾತಾವರಣದಿಂದ ಮಕ್ಕಳನ್ನ ಪಾರು ಮಾಡಿ ಅವರಿಗೆ ನೆಮ್ಮದಿಯ ನೆಲೆ ಕಲ್ಪಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ಗೃಹ ಖಾತೆ ಹಮ್ಮಿಕೊಂಡ ಕಾರ್ಯಕ್ರಮ ಒಂದರಲ್ಲಿ, ಮಿ. ಜಗನಾಥ್ ಅವರು ಈ ಮಕ್ಕಳನ್ನ ದತ್ತು ಪಡೆದಿದ್ರಂತೆ! ಆ ಮಕ್ಕಳೇನು ಅನಾಥರಲ್ಲ, ಅವರಿಗೂ ಹೆತ್ತವರಿದ್ರು. ಆದ್ರೆ ಈ ಭೂಪ ಭರ್ಜರಿ ದಾನ ಪಡೆಯೋ ಉದ್ದೇಶದಿಂದ ತಾನೇ ಅವರಿಗೆ 'ಅನಾಥರ' ಪಟ್ಟ ಕಟ್ಟಿದ್ದ. ಎಂಥಾ ಹಣೆಬರಹ ನೋಡಿ ಆ ಮಕ್ಕಳದ್ದು, ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ. ವರ್ಷಗಳೇ ಉರುಳಿದೆ ಈಗ. ಅವನು, ಆ ಮಕ್ಕಳು ಎಲ್ಲೆಲ್ಲಿದ್ದಾರೋ ಗೊತ್ತಿಲ್ಲ. ಅವ್ನ ಬಗ್ಗೆ ಆಸಕ್ತಿ ಇಲ್ಲ, ಆದ್ರೆ ಆ ಮಕ್ಕಳು ಅದೆಲ್ಲ ಕಹಿ ನೆನಪಿನಿಂದ ಹೊರಬರುವಂತಾಗಿರ್ಲಿ ಅನ್ನೋ ಮನದಾಳದ ಪ್ರಾರ್ಥನೆ. ಹಾಗೇ ಇವರೆಲ್ಲರ ಆಟಾಟೋಪ ಕಂಡೂ ಕಾಣದಂತೆ 'ನಾವಾಯ್ತು ನಮ್ಮ ಪಾಡಾಯ್ತು' ಅಂತಿರೋ ನಮ್ಮ ಜಡಭರತತನಕ್ಕೆ ಮಾಫಿ ಸಿಗಲೆಂಬ ಕೋರಿಕೆ ಕೂಡ. ಇದನ್ನ ಬರೆಯುವಷ್ಟೊತ್ತಿಗಾಗ್ಲೆ ನಿತ್ಯಾನಂದ ಮಹಾರಾಜ್ ಅವ್ರು ತಾವು ಮೆರೆಯೋದಲ್ಲದೆ ತಮ್ಮ ಮೇಣದ ಬೊಂಬೆನೂ ಮೆರೆಸಿ ಬಿಟ್ಟಿದ್ದಾರೆ... ಹೇಳಲಿಕ್ಕೆ ಇನ್ನೇನೂ ಉಳಿದಿಲ್ಲ.
ಓಂ ಶಾಂತಿ ಶಾಂತಿ ಶಾಂತಿಹಿ


Tuesday, June 29, 2010

ಗೃಹ ಪ್ರವೇಶ






आज नहीं तो कभी नहीं, ಗಟ್ಟಿಯಾಗಿಯೇ ನಿಶ್ಚಯಿಸಿದ್ದೆ ನನಗೆ ನಾನೆ. ಭೂತಾಯಿ ಮಡಿಲಿಗೆ ಬ೦ದು ಭರ್ಜರಿ ಕಾಲು ಶತಮಾನಗಳು ಕಳೆದು, ಅದರ ಮೇಲಿವತ್ತಿಗಿನ್ನೆರಡು ವರ್ಷಗಳೇ ಉರುಳಿದರೂ ನನ್ನ ಸೋ೦ಬೇರಿತನ ಒಂದಿಷ್ಟೂ ಕು೦ದಿಲ್ಲ, ಅದಕ್ಕೆ೦ದಿಗೂ ಚಿರಯೌವ್ವನ'! ಅದು ತನ್ನ೦ತದ್ದೇ ಸಮಾನ ಮನಸ್ಕರ ಪಟಾಲ೦ ಕಟ್ಕೊ೦ಡು (ಪಲಾಯನವಾದ, ಅಶಿಸ್ತು, ಕೆಲವೊಮ್ಮೆ ಭರ್ಜರಿ ವೈರಾಗ್ಯ…) ನನ್ನೆಲ್ಲ ಉತ್ಸಾಹಗಳನ್ನೂ ಸದ್ದಿಲ್ಲದ್ದೆ ಉಸಿರು ಕಟ್ಟಿಸಿರುತ್ತೆ. ಹಾಗಾಗಿಯೆ ಕಾಲು ಶತಮಾನಗಳೆಡೆಗೆ ಇಣುಕು ನೋಟ ಬೀರಿದಾಗ ಅದ್ಬುತವೆನಿಸುವ೦ತ ಆತ್ಮೀಯ ಸ್ನೇಹಗಳ ಸ೦ಪಾದನೆ ಬಿಟ್ಟರೆ ಉಳಿದ೦ತೆ ಇನ್ನಾವುದೇಸಾಧನೆಗಳbalance ಇಲ್ಲ ನನ್ನ ಬದುಕಿನ ಅಕೌ೦ಟಿನಲ್ಲಿ. ವಿಪರ್ಯಾಸ ಅ೦ದ್ರೆ ಮನಸ್ಸಿಗೆ ಆ ಕುರಿತು ಯಾವ ಖೇದನೂ ಇಲ್ಲ! ಆದ್ರೆ ಈ ಬಾರಿ ತು೦ಬಾ ತು೦ಬಾ ಗ೦ಭೀರವಾಗಿಯೇ ನಿರ್ಧರಿಸಿದ್ದೆ do or die ಅಂತ. ಛೇ ಬಿಡ್ತು ಅನ್ನಿ, ಹುಟ್ಟುಹಬ್ಬದ ದಿನ ಸಾಯೋ ಮಾತಾಡ್ತಿಲ್ಲ, ನನ್ನೀ ಪ್ರಯತ್ನದ ಕುರಿತಾಗಿ ಅಂದ್ಕೊಂಡಿದ್ದಷ್ಟೇ.





ಎಷ್ಟೆಲ್ಲಾ ಸಂದರ್ಭಗಳು ಉರುಳಿ ಹೋದವು.... ಎಷ್ಟೆಲ್ಲಾ ಘಟನೆಗಳು ಜರುಗಿ ಹೋದವು... ಆದ್ರೆ ನಾನೋ ಬರೀ ಮನಸ್ಸಿನೊಳಗೇ ಮಾತಿನರಮನೆ ಕಟ್ತಾ ಕೂತಿದ್ದೆ. ಈ ರೀತಿ ಮುಫ್ತಾಗಿ ಸಿಕ್ಕೋ ಸೈಟಲ್ಲಿ ಮನೆ ಕಟ್ಟೋ ಅವಕಾಶ ಇದ್ರೂ, ಮನಸ್ಯಾಕೋ ' ಧೀಂ ರಂಗಾ' ಅಂತ ತನ್ನೆಲ್ಲಾ ಕಾರ್ಯ ಚಟುವಟಿಕೆಗಳಿಂದ ವಿಮುಖವಾಗಿ ಕೂತಿತ್ತು. ಹಾಗಂತ ಒಂದೆರಡು ವರ್ಷಗಳ ಹಿಂದೆನೇ ಆರಂಭಶೂರತ್ವದೊಂದಿಗೆ ಗುದ್ದಲಿ ಪೂಜೆ ಮಾಡಿದ್ದೆ ಕೂಡ. ಆದ್ರೆ ಗಳಿಗೆ ದೋಷನೋ, ವಾಸ್ತು ದೋಷನೋ ಗೊತ್ತಿಲ್ಲ ಕೆಲಸ ಮುಂದುವರಿಯಲೇ ಇಲ್ಲ. ಮತ್ತೆ ಆ ಹುಮ್ಮಸ್ಸು ಪುಟಿದೆದ್ದು ಇಂಥಾ ಒಂದು ಕ್ಷಣ ಮೈದೇಳಲು ಬದುಕು ಸಕತ್ತಾಗೆ ಸಮಯದ ದಂಡ ತೆತ್ತ ಬೇಕಾಯ್ತು.




ಹೇಗೋ ಹಾಗೆ ಅನ್ನೋ ಉಡಾಫೆಗೋ, ಎಲ್ರೂ ಕಟ್ಟಿದಾರಲ್ಲ ನಾನು ಕಟ್ತೀನಿ ಅನ್ನೋ ಹು೦ಬತನಕ್ಕೆ ಬಿದ್ದೋ ಇಟ್ಟಿಗೆ ಜೋಡಿಸುವುದು ಮುಂಚಿನಿಂದನೂ ಬೇಕಿರಲಿಲ್ಲ ನನಗೆ. ಅರಿವಿದೆ ನ೦ಗೂ ಇಲ್ಲಿರುವ ಸವಾಲುಗಳು. ಕೆಲವರ ಕೆಸರೆರೆಚಾಟ, ಕಾಲೆಳೆಯೋ ಚಟ, ಮುಖವಾಡಗಳೊಂದಿಗಿನ ವ್ಯವಹಾರ... ಇದೆಲ್ಲದರಿಂದ ಕೆಲವೊಮ್ಮೆ ನಿಜವಾದ ಪ್ರತಿಭೆಗಳು ವಿದಾಯದ ಮಾತಾಡೋವಷ್ಟು ರೋಸಿ ಹೋಗಿದ್ದು … ಎಲ್ಲವನ್ನು ಹತ್ತಿರದಿಂದ ನೋಡಿದ್ದೀನಿ. ಹಾಗಾಗಿಯೇ ಈ ಪ್ರಾರಂಭದ ಕುರಿತಾಗಿ ನಂಗೆ ಅಂತಾ exitement ಇರ್ಲಿಲ್ಲ. ಆದ್ರೂ ಇವತ್ತಿಗೆ ಶುಭ ಮುಹೂರ್ತ ನಿಗಧಿ ಮಾಡಿದ್ದರ ಹಿಂದೆ ಎರಡು ಕಾರಣಗಳಿವೆ. ಒಂದು - 'ಬರಿಯದೆ ಉಳಿಯಲಾರೆ' ಅನ್ನೋ ತುಡಿತ ಈ ಬಾರಿ ತಳ್ಳಿಹಾಕಲಾಗದಷ್ಟು ಅಚಲವಾಗಿ ಬೇರೂರಿದ್ರಿಂದ. ಎರಡು - ಕಟ್ಟುವ ಕನಸಿದ್ರೂ, ತಕ್ಕ ಮಟ್ಟಿಗಿನ ಸಾಮರ್ಥ್ಯ ಇದ್ರೂ, procrastination ಅನ್ನೋ ಜನ್ಮಕ್ಕಂಟಿದ ಜಾಡ್ಯದಿಂದಾಗಿ ನನ್ನ ಬಗ್ಗೆ ನನಗೆ ಹೇಸಿಗೆ ಆಗಿರೋದ್ರಿಂದ. ಅದೇನೋ ಹೇಳ್ತಾರಲ್ವ?better to be late than to be never’ ಅಂತ, ಹೀಗೆ ಸುಮ್ನೆ ನೆನಪಿಸ್ಕೊಳ್ತಾ ಇರ್ಬೇಕು ಅದ್ನ ಅಗತ್ಯ ಕಂಡಾಗ್ಲೆಲ್ಲ, ಏನಂತೀರಿ?




ಬೀಡು ಬಿಡೋಕೆ ಮುಂಚೆ ಸ್ಥಳ ಪರಿಚಯ ಮಾಡಿಕೊಳ್ಳೋದು ಒಳಿತು ಅನ್ನೋ ಕಾರಣಕ್ಕೆ, ಪರ್ಯಟನೆ ಹೊರಟು ತಕ್ಕ ಮಟ್ಟಿಗೆ ತಿಳುವಳಿಕೆ ಪಡೆದೇ ಬಂದಿದೀನಿ. ನಿಜಕ್ಕೂ ವಿಶಿಷ್ಟ ಅನುಭವ! ಕೆಲವರ ಮನೆಯಂತೂ ಯಾವ ಪರಿ ಇದೆಯಂದ್ರೆ ತಕ್ಷಣ ಶರೀಫಜ್ಜ ನೆನಪಾದ್ರು, 'ಸೋರುತಿಹುದು ಮನೆಯ ಮಾಳಿಗೆ...'! ಮತ್ತೆ ಕೆಲವರದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಕೋಮಾ ಅವಸ್ಥೆ. ಆದ್ರೆ ಮತ್ತೆ ಕೆಲವರ ಮನೆಗಳಿದ್ಯಲ್ಲ... ಸ್ಪೂರ್ತಿಯ ಸೆಲೆ ಅದು. ಎಂಥವರಲ್ಲೂ ಕನಸಿನ ಬೀಜ ಬಿತ್ತುವಂತದ್ದು. ಒಟ್ನಲ್ಲಿ ಇತಿ-ಮಿತಿ, ಸ್ಥಿತಿ-ಗತಿ ಗಳೆಲ್ಲದರ ಪರಿಜ್ಞಾನದೊಂದಿಗೆ 'ಗೃಹಪ್ರವೇಶ' ಮಾಡ್ತಿದೀನಿ.ತುಂಬು ಹೃದಯದ ಸ್ವಾಗತ ನಿಮಗೆ, ನನ್ನೀ ಪುಟ್ಟ ಗೂಡಿಗೆ. ನಿತ್ಯ ದಾಸೋಹದ ಸಾಮರ್ಥ್ಯ ಇಲ್ಲವಾದ್ರು, ಅಪರೂಪದ ಭೇಟಿಯಲ್ಲಿ ನಿರಾಸೆಗೆಡೆಮಾಡದಂತೆ ಕಾಳಜಿ ವಹಿಸ್ತೀನಿ. ತುಂಬಾ ಭರ್ಜರಿ ಆತಿಥ್ಯದ ಅವಕಾಶಗಳಿಲ್ಲದಿದ್ರೂ (ಯಾವುದೇ ವಿಚಾರದಲ್ಲಾಗ್ಲಿ specialisation ಅಂತೇನು ಇಲ್ಲ ನಂಗೆ) ಆತ್ಮೀಯ ವಾತಾವರಣ ಸೃಷ್ಟಿಸಲು ಪ್ರಾಮಾಣಿಕ ಪ್ರಯತ್ನ ಪಡ್ತೀನಿ. ಬರುವ ಶ್ರಮ ತಗೊಳ್ತಿರಲ್ವಾ? ಸಾಹಿತ್ಯದ ಯಾವುದೇ ಪ್ರಕಾರನ ಓದಲು ಕೈಗೆತ್ತಿಕೊಂಡಾಗ ನನ್ನಲ್ಲಿರುವುದು ಮೂರು ಬಗೆಯ ನಿರೀಕ್ಷೆಗಳು. ಒಂದೋ ಮಾಹಿತಿ ಅಥವಾ ಮನೋರಂಜನೆ ಇಲ್ಲವೇ ಮಂಥನ. ಹಾಗಾಗಿ ಅದೇ ಜವಾಬ್ದಾರಿಯೊಂದಿಗೆ ನಾನಿಲ್ಲಿ ಮುನ್ನಡೆಯಲು ಬದ್ಧಳಾಗಿದ್ದೀನಿ. ಮನಸ್ಸಿಗನ್ಸಿದ್ನೆಲ್ಲ ಅಕ್ಷರಕ್ಕಿಳಿಸುವ ಸಾಮರ್ಥ್ಯ ಆಗ್ಲಿ, ಮುಕ್ತವಾಗಿ ಪ್ರಕಟಿಸೋ ದಾರ್ಡ್ಯ ಆಗ್ಲಿ ನನಗಿಲ್ಲ. ಹಾಗಾಗಿ ನನ್ನೆಲ್ಲ ಬರವಣಿಗೆಗೂ ಇದು ವೇದಿಕೆ ಆಗದೆ ಇರಬಹುದು.ಆದರೂ ತುಂಬಾ ಪ್ರೀತಿಯಿಂದ, ಆಸ್ಥೆಯಿಂದ ಮುನ್ನಡಿತಿದ್ದೀನಿ ಜೋತೆಗಿರ್ತೀರ ತಾನೇ?




ಗೊತ್ತಿದೆಯಲ್ವಾ ನಿಮಗೂ? ಯಾರದೇ ಮನೆಗೆ ಹೋಗುವಾಗಲು ಖಾಲಿ ಕೈಲಿ ಹೋಗಬಾರ್ದು ಅಂತಾರೆ. ಆದ್ರೆ ನನ್ನ ಮನೆಯಲ್ಲದು ಸ್ವಲ್ಪ ಉಲ್ಟಾ, ಇಲ್ಲಿಗೆ ಬಂದವರ್ಯಾರು ಬರಿಗೈಲಿ ಹಿಂದಿರುಗಬಾರ್ದು ಅಷ್ಟೇ. ನೆನಪಿರಲಿ 'ಅನಿಸಿಕೆಗಳೇ ಉಡುಗೊರೆ'. ನನ್ನಲ್ಲಿನ ತಿದ್ದಿಕೊಳ್ಳಬೇಕಾದ ಅಂಶಗಳನ್ನ ಬೊಟ್ಟು ಮಾಡಿ ತೋರಿಸೋ ಹೊಣೆಗಾರಿಕೆ ನಿಮ್ಮದು. ಎಂಥಾ ಕಟು ವಿಮರ್ಶೆಗೂ ನನ್ನದು ಮುಕ್ತ ಮನಸ್ಸಿನ ಸ್ವಾಗತ. ಆದ್ರೆ ಬರಿದೆ ಕುಟುಕುಗಳಿಗೆ... मारो गोली !




ಕಡೆಯದಾಗಿ. 'ಗುಬ್ಬಿ' ನನ್ನ ಪಾಲಿನ ನಿರಂತರ ಆಕರ್ಷಣೆ. ಅದಕ್ಕೆ ಅದರದ್ದೇ ಆದ ಹೆಚ್ಚುಗಾರಿಕೆಗಳೇನಿಲ್ಲದಿದ್ರೂ ಅದರ ಸರಳ, ಸಹಜ ಹಾಗು ಮುಗ್ಧ ನಡವಳಿಕೆ ಇಂದಾಗಿ ಮನಸ್ಸಿಗೆ ಆಪ್ತ ಅನ್ನಿಸುತ್ತೆ. ಆ ಪುಟ್ಟ ಜೀವ ನನ್ನ ಪಾಲಿನ ಸ್ಫೂರ್ತಿ. ಹಾಗಾಗಿ ನನ್ನೀ ಗೂಡಿಗೆ 'ಗುಬ್ಬಿಮನೆ' ಅನ್ನೋ ಹೆಸರಿಟ್ಟು ನಿಮ್ಮ ಮುಂದೆ ಪ್ರಸ್ತುತ ಪಡಿಸ್ತಿದ್ದೀನಿ. ಹಾರೈಕೆಗಳಿರ್ಲಿ ನಿಮ್ಮದು.




ಮತ್ತೆ ಸಿಕ್ಕೋಣ.
ತುಂಬು ವಿಶ್ವಾಸದೊಂದಿಗೆ
ರಜನಿ.