Thursday, November 25, 2010

ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ, ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ..

     ನೆಪಕ್ಕೆ ಎಡೆ ಇಲ್ಲದಂತಹ ವಿಶೇಷ ಸಂದರ್ಭ. ಇದರ ಆಚರಣೆ ಬಗ್ಗೆಯೂ ಸಂಪ್ರದಾಯವಾದಿಗಳ, ಕಟ್ಟರ್ ದೇಶಪ್ರೇಮಿಗಳ ತಕರಾರು ಇದ್ದೀತು. ಆದ್ರೆ ನನಗ್ಯಾಕೋ ಈ ಆಚರಣೆ ತುಂಬಾ ಹಿಡಿಸಿರೋದ್ರಿಂದ ಪಾಲ್ಗೊಳ್ಳುವ ಸಂಭ್ರಮ! ಈಗಿರುವ ಕಂಪೆನಿಗೆ ಕಾಲಿಡುವ ಮೊದಲು, ನಂಗೆ ಈ ಆಚರಣೆಯ ಗುರುತು, ಪರಿಚಯ ಇರಲಿಲ್ಲ. ಇಲ್ಲಿಗೆ ಬಂದ ಮೇಲೆಯೇ
ತಿಳಿದದ್ದು ನವೆಂಬರ್ ನಾಲ್ಕನೇ ವಾರಾಂತ್ಯದ ವಿಶೇಷ. Yes it is time for thanksgiving...  :-)


     ಧನ್ಯವಾದ ಹೇಳಲಿಕ್ಕೂ ದಿನ ಬೇಕಾ? ಅಂತ ಹಿಡಿಸದವರು ಮೂಗು ಮುರೀಬಹುದು. ಆದ್ರೆ ವರ್ಷಪೂರ್ತಿ ದಿನಂಪ್ರತಿ ಸ್ನಾನ ಮಾಡ್ತಿದ್ರೂ, ಹೇಗೆ ದೀಪಾವಳಿಯಲ್ಲಿ 'ಅಭ್ಯಂಜನ' ಕ್ಕೆಂದೇ ವಿಶೇಷ ಮಹತ್ವ ಇದೆಯೋ, ಹಾಗೆ
ವರ್ಷಾಂತ್ಯದಲ್ಲಿ  ಇದೂ ಕೂಡ ಅಂತ ಭಾವಿಸುವವಳು ನಾನು. ಕೆಲವರು ಹೇಳ್ತಾರೆ 'no thanks and sorry in friendship' ಅಂತ. ಆದ್ರೆ ನಂಗೆ ಇದರಲ್ಲಿ ಸಹಮತವಿಲ್ಲ. ನೆರವಿಗೊಂದು ಧನ್ಯವಾದ, ತಪ್ಪಿಗೊಂದು ಕ್ಷಮಾಪ್ಪಣೆ ಯಾವುದೇ ಸ೦ಬ೦ಧದಲ್ಲಿ ಕ್ಷೇಮಕರ ಅನ್ನೋದು ನನ್ನ ನಂಬಿಕೆ. Thanksgiving ನೆಪದಲ್ಲಿ ಯಾವುದೋ ಗ್ರೀಟಿಂಗ್ ಕಂಪನಿಗೆ ಲಾಭ ಮಾಡುವ ಬದಲು, ಇಡೀ ವರ್ಷದಲ್ಲಿ ನಮಗೆ ನೆರವಾದ, ಪರಿಚಿತ / ಅಪರಿಚಿತ ಮಹಾನೀಯರನ್ನೆಲ್ಲ ಮನತುಂಬಿ ನೆನೆದು ಅವರಿಗೆ ಒಳಿತನ್ನ ಹಾರೈಸುವುದರಲ್ಲಿ ನಿಜಕ್ಕೂ ಒಂಥರಾ ಧನ್ಯತಾ ಭಾವವಿದೆ. ಒಂದಿಡೀ ವರ್ಷದ ಮೆಲುಕು ಹಾಕಿದರೆ ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದವರೆಷ್ಟೋ... ಅದರಲ್ಲಿ ಪರಿಚಯವೇ ಇಲ್ಲದೆ ಅಂತಃಕರಣ ಮಿಡಿದವರೆಷ್ಟೋ...

     ಇಡೀ ವರ್ಷದ ಬುತ್ತಿಯನ್ನ ಬಿಚ್ಚಿದರೆ ಸಾಲು ಸಾಲು ನೆನಪುಗಳ ಮೆರವಣಿಗೆ. ಅದರಲ್ಲೊಂದಷ್ಟು ಸಿಹಿ, ಮತ್ತಷ್ಟು ಕಹಿ. ಕಾಲನ ಬೋಗುಣಿಯಲ್ಲಿ ಸಿಹಿ ಮತ್ತಷ್ಟು ಮಧುರವಾಗಿ, ಕಹಿ ತನ್ನ ಒಗರನ್ನ ಕಳೆದುಕೊಂಡಾಗಲಷ್ಟೇ ಬದುಕು
ಆನಂದಮಯಿಯಾಗೋದು. ಹಾಗಾಗಿ ಬದುಕನ್ನ ಸಂಭ್ರಮಿಸಲಿಕ್ಕೆ ಇಂಥಾ ಆಚರಣೆಗಳು ಸಾಕಷ್ಟು ಕಾರಣಗಳನ್ನ ಒದಗಿಸ್ತಾವೆ. ಅವತ್ತು appraisal  ದಿನ ತುಂಬಾನೇ disturb ಆಗಿದ್ದ ನನ್ನ ಮನಸ್ಸಿಗೆ ಸ್ಪಂದಿಸಿದ ಹಿಂದೆಂದೂ ಸಿಕ್ಕಿರದ, ಮುಂದೆಂದೂ ಕಾಣ ಸಿಗದ cabmet ಮಂಗಳ, ಊರಿಂದ ಮರಳುವಾಗ ಭರ್ಜರಿ ಮಳೆಯಲ್ಲಿ ಸಿಕ್ಕಿ ಕಂಗಾಲಾಗಿ ನಿಂತಿದ್ದಾಗ ತಮ್ಮ ರಿಕ್ಷಾದಲ್ಲಿ lift ಕೊಟ್ಟ ರಾಹುಲ್ ದಂಪತಿಗಳು, ಹುಷಾರಿಲ್ಲದೆ ನರಳುತಿದ್ದಾಗ ತಮ್ಮ ಸಿಹಿ ಸಿಹಿ ಸೀಯಾಳದಿಂದ ತಂಪು ಬೀರಿದ್ದ ಆ 'ಎಳನೀರ ತಾತ', ಯಾವುದೋ ಜ್ಞಾನದಲ್ಲಿ (ಬೇಜವಾಬ್ದಾರಿಗೆ ಪರ್ಯಾಯ ಪದ!) ಹೊಸತಾಗಿ ಕೊಂಡಿದ್ದ ಮೊಬೈಲ್ ನ ಮರೆತು ಬಂದಿದ್ದಾಗ, ಕರೆ ಸ್ವೀಕರಿಸಿ ಪ್ರಾಮಾಣಿಕವಾಗಿ ಹಿಂತಿರುಗಿಸಿದ ಆ ಅಪರಿಚಿತ ಹುಡುಗರು,
ನಾಟಕ ಮುಗಿಸಿ ರಾತ್ರಿ ಹತ್ತೂವರೆಗೆ ಮನೆಗೆ ಮರಳುವಾಗ ಕೈಕೊಟ್ಟ ಗಾಡಿನ ರಿಪೇರಿ ಮಾಡಿಕೊಟ್ಟ ಆ ಆಪತ್ಬಾಂದವ ಆಟೋ ಚಾಲಕ, ಜನರಾಶಿಯಿಂದ ತುಂಬಿ ತುಳುಕುತ್ತಿದ್ದ ಬಸ್ ನಲ್ಲಿ ತಮ್ಮ  ಮಗಳಿಗೆ   half ticket ತಗೊಂಡಿದ್ರೂ ನನಗಾಗಿ ಸೀಟ್ ಬಿಟ್ಟು ಕೊಟ್ಟ ಆ ಕರುಣಾಮಯಿ ತಾಯಿ... ಎಣಿಸುತ್ತಾ ಹೋದರೆ ನೆನಪುಗಳು ಅಸಂಖ್ಯ, ನೆರವುಗಳು ಅಮೂಲ್ಯ. ಇವರ್ಯಾರು ಸ್ನೇಹಿತರಾಗಲಿ, ಸಂಬಂಧಿಕರಾಗಲಿ ಅಲ್ಲ. ಎಲ್ಲವೂ ಆ ಕ್ಷಣದ ನಂಟುಗಳು. ಲೆಕ್ಕಾಚಾರವೇ ಜೀವನವಾಗಿರುವ ಈ ಕಾಲದಲ್ಲಿ, ನಿಸ್ವಾರ್ಥವಾಗಿ ನೆರವಾದ ಇವರೆಲ್ಲರನ್ನ ನೆನೆಸಿಕೊಂಡಾಗ ಬದುಕು ವಿಸ್ಮಯ ಎನ್ನಿಸುತ್ತೆ. ಇಂಥಹ ವಿಸ್ಮಯ, ಧನ್ಯತೆ ಕೊಡಮಾಡಿದ ಆ ಸಜ್ಜನರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು.

     ಇದೆಲ್ಲ ಅಪರಿಚಿತರ ನೆರವಿನ ಮಾತಾಯ್ತು. ಇನ್ನು ಪರಿಚಿತರದ್ದು... ಬೇಡ ಅದಕ್ಕೆ ಅಕ್ಷರದ ಬೇಲಿ,ಆ ಋಣಭಾರ ನನಗೇ ಇರಲಿ. ಆದ್ರೆ ಪಡೆದ ನೆರವುಗಳು ಕಾಲಚಕ್ರದಡಿಯಲ್ಲಿ 'ವಜ್ಜೆಯಾಗಿ' ಪರಿಣಮಿಸದಿರಲಿ ಎ೦ಬುದಷ್ಟೇ ಪ್ರಾರ್ಥನೆ!

ಮತ್ತೊಮ್ಮೆ ನನ್ನೆಲ್ಲ ಬಳಗಕ್ಕೂ ' ಮನಸ್ವೀ ಧನ್ಯವಾದಗಳು'.

ಪ್ರೀತಿಯಿಂದ,

ರಜನಿ.

4 comments:

  1. ಹೌದು... ಕೆಲವು ನರೆವುಗಳು ಅನಿರೀಕ್ಷಿತವಾಗಿ ಸಿಕ್ಕಿಬಿಡುತ್ತದೆ. ಆ ಕ್ಷಣದ ನ೦ಟುಗಳು.... ತು೦ಬಾ ಇಷ್ಟವಾಯಿತು.....

    ಅದೇನು... "ಹಿ೦ದೆದೂ ಸಿಕ್ಕಿರದ, ಮು೦ದೆ೦ದೂ ಕಾಣಸಿಗದ..."? ನನಗೆ ಅರ್ಥ ಆಗಲಿಲ್ಲ...

    ReplyDelete
  2. ಮೆಚ್ಚುಗೆಗೆ ಧನ್ಯವಾದಗಳು ಸುಧೇಶ್.


    "ಹಿ೦ದೆದೂ ಸಿಕ್ಕಿರದ, ಮು೦ದೆ೦ದೂ ಕಾಣಸಿಗದ..."? ಹಿಂದೆ ಗಹನ ಅರ್ಥಗಳೇನಿಲ್ಲ. ಆ ಹುಡುಗಿ ಮತ್ತ್ಯಾವತ್ತಿಗೂ ನಂಗೆ ಸಿಗಲೇ ಇಲ್ಲ ಅಷ್ಟೇ.
    ವಿಚಾರಿಸಿದ ಮೇಲೆ ತಿಳೀತು ಅವಳು ಕೆಲಸ ಬಿಟ್ಟಿದಾಳೆ ಅಂತ.

    ReplyDelete
  3. neevu bareyodu nanaga bhahala eshta aagatadari

    ReplyDelete