ಇದನ್ನ ಏನಂತ ಅರ್ಥೈಸ್ಕೋಬೇಕು ಅಂತಾನೆ ತಿಳೀತಿಲ್ಲ. 'ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ' ಅನ್ನುವ ಭಂಡತನ ಅಂತನೋ? ಅಥವಾ ಧೂಳಿನಿಂದ ಎದ್ದು ಬರುವ finixisam ಅಂತನೋ? ಗೊತ್ತಾಗ್ತಿಲ್ಲ. ಮೂರು ವಾರಗಳ ನಂತರ ಊರಿನ ಬಸ್ ಹತ್ತಿ ಕಿಟಕಿಯಾಚೆಗೆ ಕಣ್ಣಿಟ್ಟು ಕುಳಿತಾಗ, ಬಿಡದಿ ಹತ್ತಿರ ಬರುತ್ತಿದ್ದಂತೆ ಒಂಥರಾ ತಣ್ಣನೆಯ ಶಾಕ್. ಪ್ರಣಯಕಲಾ ಪ್ರವೀಣ, ರಾಸಲೀಲ ಸಾರ್ವಭೌಮ, socalled ಸ್ವಾಮೀಜಿ ನಿತ್ಯಾನಂದ ತನ್ನ 'ಅಡ್ಡ' ನಿತ್ಯಾನಂದ ಧ್ಯಾನ ಪೀಠದಲ್ಲಿ 'ಗುರುಪೂರ್ಣಿಮ ಜಯಂತಿ'ಗೆ ಸಾರ್ವಜನಿಕರೆಲ್ಲರಿಗೂ ಆ(ಹಾ!)ದರದ ಸ್ವಾಗತ ಕೋರುತ್ತ ತನ್ನ ಎಂದಿನ close up ನಗುವಿನಲ್ಲಿ ರಸ್ತೆ ಇಡೀ ರಾರಾಜಿಸ್ತಿದ್ದ! ದಂಗಾದೆ, ಆಶ್ಚರ್ಯ ಚಕಿತಳಾದೆ, ಅಚ್ಚರಿಗೊಳಗಾದೆ... ಇದರ ಸಮಾನಾರ್ಥಕ ಜೊತೆಗಾರ ಪದಗಳಷ್ಟನ್ನೂ ಬೇಕಾದರೆ ಸೇರಿಸಿಕೊಳ್ಳಿ. ಯಾಕಂದರೆ ನನ್ನ ಮಟ್ಟಿಗದು ಆ ಪರಿ ಅನಿರೀಕ್ಷಿತ ಮತ್ತು ನನ್ನನ್ನದು ಪೂರ್ತಿ stun ಮಾಡ್ಬಿಟಿತ್ತು .
ಇದಲ್ವಾ guts ಅಂದ್ರೆ? ಬದುಕಿನ ಸಣ್ಣ ಪುಟ್ಟ ಸೋಲಿಗೂ, ನಿರಾಸೆಗೂ ಇನ್ನಿಲ್ಲದಂತೆ ಒದ್ದಾಡಿ, ಪರಿಚಿತರ ಕಣ್ಣಿನಿಂದ, ಆಪ್ತೆಷ್ಟರ ಪ್ರಶ್ನಾವಳಿಯಿಂದ ತಪ್ಪಿಸಿಕೊಂಡು ಓಡಾಡಲು ಎಷ್ಟೆಲ್ಲಾ ಪಾಡು ಪಡ್ತೀವಲ್ವಾ ನಾವು ಸಾಮಾನ್ಯ ಜನತೆ ? ಆದ್ರೆ ಈ ಮಹಾಶಯ? ಭಳಿರೆ! ಪರ ರಾಜ್ಯದ ವ್ಯಕ್ತಿ ಒಬ್ಬ ನಮ್ಮ ನಾಡಿನಲ್ಲಿ ನೆಲೆ ನಿಂತು ಈ ಪರಿ ಮನ್ಮಾನಿ ಮಾಡೋದು ಅಂದ್ರೆ ಸಾಮಾನ್ಯದ ಮಾತಾ? ಅವನ ಬೆನ್ನ ಹಿಂದೆ ಯಾರೇ ಇರಬಹುದು, ಯಾರೇ ಅವನೆಡೆಗೆ ಅಭಯ ಹಸ್ತ ಚಾಚಿರಬಹುದು. ಆದ್ರೆ ಸಾರ್ವಜನಿಕರೆದುರಿಗೆ ಬಂದು, ಅವರ ಕಣ್ಣಿಗೆ ಕಣ್ಣು ಕೂಡಿಸಬೇಕಾದವನು ಇವನೇ ಅಲ್ವ? ಒಂದಿನಿತು ತಳಮಳ, ನಾಚಿಕೆ ಕಾಡಲಿಕ್ಕೆ ಇಲ್ವಾ ಅವನಿಗೆ? ನಿಜಕ್ಕೂ ಅಚ್ಚರಿ ಅನ್ನಿಸ್ತಿದೆ. ನಮ್ಮ ಮಾಮೂಲಿ ಸಿನಿಕತನದೊ೦ದಿಗೆ ಏನೇ ಜರಿದು, ಹೀನೈಸಿ ಅಸಮಧಾನನ ತಣ್ಣಗಾಗಿಸಿ ಕೊಳ್ಳಬಹುದು. ಆದ್ರೂ… ಈ ಕ್ಷಣಕ್ಕೂ ಅವನ ಭ೦ಡತನದೆಡೆಗೆ ನಂದು ಕಣ್ಣರಳಿಸಿದ ನೋಟ.
ಇದೇ ಗು೦ಗಿನಲ್ಲಿ ಪ್ರಯಾಣ ಮುಂದುವರೆಸುತ್ತಿದ್ದಂತೆ ನನ್ನ ಕಾಲೇಜು ದಿನಗಳ ನೆನಪುಗಳು ಮರುಕಳಿಸಲಾರ೦ಬಿಸಿತು. ನನ್ನ ಡಿಗ್ರಿ ಎರಡನೆ ವರ್ಷದ ದಿನಗಳವು. ABVP ಯ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಅವನನ್ನು ನೋಡಿದ್ದು. ಬಿಳಿ ಪಂಚೆಯೊಂದನ್ನು ಉಟ್ಟು, ಅಂತದ್ದೇ ಒಂದು ಪಂಚೆನ ಮೈ ಮೇಲೆ ಹೊದ್ದು, ದೇಶಭಕ್ತಿ ಜಾಗೃತಿಯ ಸಂದೇಶನ ತನ್ನ ಜಾದೂ ಕಲೆಯ ಮೂಲಕ ಪ್ರದರ್ಶಿಸುತ್ತಾ, ಜೀವಂತ ಆದರ್ಶದಂತೆ ಭಾಸವಾಗಿದ್ದ ನಮಗೆಲ್ಲ, ಜಾದೂಗಾರ ಜಗನ್ನಾಥ್! ಅದೆ೦ಥಾ ದೇಶಾಭಿಮಾನದ ಮಾತುಗಳು ಅ೦ತೀರಿ? ಈ ಕ್ಷಣಕ್ಕೆ ನೀವು ಕಾಶ್ಮೀರದ ಗಡಿಯಲ್ಲಿ ಹೋಗಿ ನಿಲ್ಲಲ್ಲು ಸನ್ನದ್ದರಾಗಿ ಬಿಡಬೇಕು, ಆ ಪರಿ ಆವೇಶ ಉಕ್ಕಿ ಬರುವ೦ತಾ ಮಾತುಗಳವು. ತನ್ನದೇ ಅನಾಥಾಶ್ರಮವೊಂದನ್ನು ನಡೆಸುತ್ತಿದ್ದ ಪುಣ್ಯಾತ್ಮ 'ನಿಮ್ಮ ಮನೆ ಸುತ್ತಾನೋ, ಹಾದಿ ಬದಿಯಲ್ಲೋ ಯಾರಾದ್ರು ಅನಾಥ ಮಕ್ಕಳನ್ನ ಕಂಡ್ರೆ ನನಗೆ ತಿಳಿಸಿ, ನಾನೇ ಖುದ್ದಾಗಿ ಬಂದು ಕರ್ಕೊಂಡು ಹೋಗ್ತೀನಿ. ನಿಮ್ಮದೇನಿದ್ರು ಎಂಟಾಣಿ postcard ಖರ್ಚು, ಉಳಿದಿದ್ದೆಲ್ಲ ನಂದೇ' ಅಂದಾಗ ನಮ್ಮೆಲ್ಲರ ಕಣ್ಣಿಗೆ 'ಸೇವಾಮೂರ್ತಿ' ಯಂತೆ ಗೋಚರಿಸಿದ್ದ. ಸುಭಾಷ್ ಚಂದ್ರ ಭೋಸರ ಹೇಳಿಕೆಯನ್ನ ಸ್ವಲ್ಪ twist ಮಾಡಿ 'ನಂಗೆ ಅನಾಥಮಕ್ಕಳನ್ನ ಕೊಡಿ, ನಾನು ನಿಮಗೆ ಸ್ವಸ್ಥ ಸಮಾಜ ಕೊಡ್ತೀನಿ' ಅನ್ನೋ punch line ಬೇರೆ! ತು೦ಬಾನೇ impress ಆಗಿ ಹೋಗಿದ್ವಿ ನಾವೆಲ್ಲ. ನನಗಾಗ ತಕ್ಷಣಕ್ಕೆ ನೆನಪಾಗಿದ್ದು ನಮ್ಮನೆ toilet clean ಮಾಡಲು ಬರ್ತಿದ್ದ 'ಸ್ಲಂ ಬಾಲ'. ಮುಂದಿನ ಬಾರಿ ಅವನು ಬಂದಾಗ ಇದೇ ಉದ್ದೇಶದಿಂದ ಅವನ ಪೂರ್ವಾಪರ ವಿಚಾರಿಸಿದ್ದೆ ಕೂಡ. ಆದ್ರೆ ಮನೆಯವರೆಲ್ಲ ನನ್ನ ವಿಚಾರಣೆನ ತಮಾಷೆ ಮಾಡಿ ನಕ್ಕಾಗ ನಮ್ಮನೇಲಿ ಸಮಾಜ ಸೇವೆಗೆ ಎನ್ಕರೇಜೆ ಮಾಡಲ್ಲ ಅಂತ ಬಡಬಡಿಸುತ್ತ ಸುಮ್ಮನಾಗಿದ್ದೆ.
ಆದರೆ ಇದೇ ಅಭಿಮಾನ ಧಾರೆಯೊಂದಿಗೆ ಎರಡನೇ ಬಾರಿಗೆ ಅವನ ಕಾರ್ಯಕ್ರಮಕ್ಕೆ ಹಾಜಾರಾದಾಗ, ಅದೇ ಮೊನಚು ಮಾತು, ವಿಶಾದಭರಿತ ಸತ್ಯಗಳನ್ನ ಪುನರುಚ್ಚರಿಸುತ್ತಾ ಅತಿಯಾದ ಸ್ವಪ್ರಶಂಸೆಯಲ್ಲೇ ಮುಳುಗಿ ಹೋಗಿ ಯಾಕೊ ಖಾಲಿ ಖಾಲಿಯಾದ೦ತೆ ಅನ್ನಿಸಿದ್ದ. ಅವನ ನಡವಳಿಕೆಗಳಲ್ಲಿ ಸಹಜತೆಗಿಂತ over acting ಅಂಶಗಳೇ ಹೆಚ್ಚಾಗಿ ಕಂಡಂತಾಗಿ ನಮ್ಮ ಅಭಿಮಾನದ ಬಲೂನು ಸದ್ದಿಲ್ಲದ್ದೆ ಗಾಳಿ ಕಳೆದುಕೊಂಡಿತ್ತು. ಆದ್ರೆ ನನ್ನ ಬಹುತೇಕ ಸ್ನೇಹಿತರು ಇನ್ನೂ 'ಜಾದು ನಶೆಯಲ್ಲೇ' ಮುಳುಗಿ ಹೋಗಿದ್ರಿಂದ, ಕಡೆಯ ವರ್ಷದ ಶಾರದ ಪೂಜೆಯಲ್ಲಿ contribution ಅಂತ ಒಟ್ಟಾದ ಹಣದ ಒಂದು ಭಾಗವನ್ನು ಜಗನ್ನಾಥ್ ಸಾಹೇಬ್ರಿಗೆ ಕೊಡುವುದೆಂದು ತೀರ್ಮಾನ ಆಯ್ತು. ಇದರ ಬಗ್ಗೆ ಆಕ್ಷೇಪ ಎತ್ತಿದ್ದ ನಾನು, ಸ್ನೇಹಿತನೊಬ್ಬನ ಕೆಂಗಣ್ಣಿಗೆ ಸಮಾಜ ಸೇವೆಗೆ ಅಡ್ಡಗಾಲು ಹಾಕೋ 'ದೇಶದ್ರೋಹಿ' ತರ ಕಂಡಿದ್ದೆ! ಅವತ್ತು ಶಾರದಾ ಪೂಜೆಯ ದಿನ ಸಾಹೇಬರು ತಮ್ಮ ಜೊತೆ ನಾಲ್ಕು ಪುಟಾಣಿಗಳನ್ನೂ ಕರೆತಂದಿದ್ರು. ಎಲ್ಲರೂ ಹತ್ತು ವರ್ಷದ ಒಳಗಿನ ಹೆಣ್ಣು ಮಕ್ಕಳೇ ಇದ್ದರೆಂಬ ನೆನಪು. ಆದ್ರೆ ಅವರಿದ್ದ ಸ್ಥಿತಿ ಮಾತ್ರ ತುಂಬಾ ದಯಾನೀಯವಾಗಿತ್ತು. ಯಾಕೋ ಉತ್ತಮ ವಾತಾವರಣದ ಮಕ್ಕಳಲ್ಲಿರುವ ಪ್ರಶಾಂತತೆ, ಮುಗ್ದತೆ ಆ ಕಣ್ಣುಗಳಲ್ಲಿರಲಿಲ್ಲ. ತುಂಬಾ ಕೊಳಕಾದ ಹರಿದ ಬಟ್ಟೆ, ಕೆದರಿದ ಕೂದಲು, ಕಡೆ ಪಕ್ಷ ಮುಖನು ತೊಳೆಯದೇ ಇದ್ದ ಅವರನ್ನ ನೋಡಿ 'ಎಲ್ಲೊ ಏನೋ ಎಡವಟ್ಟಿದೆ' ಅನೋ ಅನುಮಾನ ನಮ್ಮ ಗುಂಪಿನ ಬಹುತೇಕರಿಗೆ ಪ್ರತ್ಯೇಕವಾಗೆ ಬಂದಿತ್ತು. ತೀರ ಇಸ್ತ್ರಿ ಮಾಡಿದ ಬಟ್ಟೆಯ ನಿರೀಕ್ಷೆ ನಮಗಿಲ್ಲದಿದ್ರು, ಹರಿದ ಬಟ್ಟೆಯನ್ನ ಹೊಲೆದು ಕೊಳ್ಳಲು ಸೂಜಿ-ದಾರ , ಕೆದರಿದ ಕೂದಲನ್ನು ಬಾಚಲು ಬಾಚಣಿಗೆ, ಕಡೆ ಪಕ್ಷ ಮುಖ ತೊಳೆಯಲು ನೀರೂ ಸಿಕ್ಕದಂತ ದರಿದ್ರ ಪರಿಸ್ಥಿತಿಯನ್ನ ಒಪ್ಪಿಕೊಳ್ಳಲು ಮನಸ್ಯಾಕೋ ಸಿದ್ಧವಿರಲಿಲ್ಲ. ಈ ಮುಗ್ಧ ಕಂದಮ್ಮಗಳನ್ನ ಮುಂದಿಟ್ಟುಕೊಂಡು ಹಣ ಮಾಡ್ತಿದಾನಾ ಈ ಪಾಪಿ? ಅನ್ನೋ ಆಕ್ರೋಶ ಭರಿತ ಅನುಮಾನ. ತನ್ನ ಮಾಮೂಲಿ ಗಿಮಿಕ್ ನೊಂದಿಗೆ ಜಾದು ಕಾರ್ಯಕ್ರಮ ಮುಗಿಸಿದ ಮೇಲೆ ಗೌರವ ಸಮರ್ಪಣೆಯ ಸಮಯದಲ್ಲಿ 'ಅಭಿಮಾನಿ ದೇವರುಗಳು' ಹಾರ ಹಾಕಿದರೆ, ತನ್ನ ಮೂವತ್ತೆರಡು ಹಲ್ಲುಗಳನ್ನೂ ಗಿಂಜಿ ಕಟು ವಾಸ್ತವದಲ್ಲೂ ಹಾಸ್ಯಪ್ರಜ್ಞೆ ಮೆರೆವವನಂತೆ 'ದಯವಿಟ್ಟು ಇನ್ಮೇಲೆ ಹೀಗೆ ಹೂವಿನ ಹಾರ ಹಾಕೋ ಬದಲು ನಾಲ್ಕು ನಿಂಬೆಹಣ್ಣು ಕೊಟ್ಬಿಡಿ. ನಾಳೆ ಬೆಳಿಗ್ಗೆ ನನ್ನ ಮಕ್ಕಳಿಗೆ ಚಿತ್ರಾನ್ನ ಮಾಡಿ ಹಾಕ್ಲಿಕ್ಕಾದ್ರು ಆಗುತ್ತೆ' ಅಂದಾಗ ನಮ್ಮೆಲ್ಲರ ಮನಸ್ಸು ಮಿಡಿಯೋ ಬದಲು ಕುದಿದು ಹೋಗಿತ್ತು , ಎಲಾ ಇವನಾ, ಚಿತ್ರಾನ್ನಕ್ಕೆ ಕಡ್ಲೆಬೀಜ ದಿಂದ ಹಿಡಿದು ಕೊತ್ತಂಬರಿ ಸೊಪ್ಪಿನ ತನಕ ಎಲ್ಲಕ್ಕೂ ಸಾಕಾಗುವಷ್ಟು ದುಡ್ಡು ಕೊಟ್ಟಿದೀವಿ ಆದ್ರೂ ತನ್ನ ಒಗ್ಗರಣೆ ಹಾಕೋ ಬುದ್ಧಿ ಬಿಡೋಲ್ವಲ್ಲ ಈ ಪಾರ್ಟಿ ಅಂತ. ಅವನ ಪರ-ವಿರೋಧ ಚರ್ಚೆಗಳು ನಮ್ಮ ಮಧ್ಯೆ ಸುಮಾರು ದಿನಗಳ ತನಕ ನಡೆದಿತ್ತು.
ನನ್ನ ಡಿಗ್ರೀ ಮುಗಿದು ಸುಮಾರು ಒಂದು ವರ್ಷದ ಆನಂತರದಲ್ಲಿ ಇರಬೇಕು, ಯಾರೊಂದಿಗೋ ಹಣ ಕಾಸು ವಿಚಾರದಲ್ಲಿ ರಗಳೆ ಮಾಡಿಕೊಂಡು ಮೊದಲ ಬಾರಿಗೆ ಅವನ ಒಂದೊಂದೇ ಹಗರಣಗಳ ಪಟ್ಟಿ ಹೊರಕ್ಕೆ ಬಂತು. ಬರೀ ಆಸ್ತಿ, ಹಣಕಾಸಿನ ಹಗರಣ ಆಗಿದ್ದಿದ್ರೆ ನನ್ನನ ಇಷ್ಟು ವರ್ಷಗಳ ನಂತರನೂ ಕಾಡುವಷ್ಟು ತೀವ್ರತೆ ಪಡೆದು ಕೊಳ್ತಿರ್ಲಿಲ್ವೇನೋ. ಆದ್ರೆ ಆ ಎಳೆ ಮಕ್ಕಳೊಂದಿಗೆ ಅವನು ನಡೆದುಕೊಂಡಿದ್ದ ರೀತಿ ನಮ್ಮನ್ನಾ ತುಂಬಾ ತಲ್ಲಣಕ್ಕೆ ದೂಡಿತ್ತು. ಈಗಷ್ಟೇ ಹರೆಯಕ್ಕೆ ಕಾಲಿಡ್ತಿದ್ದ ಹೆಣ್ಣು ಮಕ್ಕಳು ತನ್ನ ಕೈಯಲ್ಲೇ ಸ್ನಾನ ಮಾಡಿಸಿ ಕೊಳ್ಳಬೇಕು ಅನ್ನೋದ್ರಿಂದ ಹಿಡಿದು, ತನ್ನೊಡನೆಯೇ ಮಲಗಬೇಕು ಅನ್ನುವಲ್ಲಿಯವರೆಗೂ! ಎಂಥಾ ಅಮಾನವೀಯ, ಅನಾಗರೀಕ ವರ್ತನೆ... ಅಂದು ಅವನೊಂದಿಗೆ ಬಂದಿದ್ದ ಪಾಪಚ್ಚಿಗಳು ತುಂಬಾ ದಿನದ ತನಕ ನಮ್ಮ ಮನಸನ್ನ ಕಾಡಿದ್ರು. ಆ ಮಕ್ಕಳಾದರು ಎಲ್ಲಿಂದ ಬಂದಿದ್ದರು ಗೊತ್ತೇ? ಬಹುತೇಕರು ಲಡಾಕ್, ಜಮ್ಮು ಮತ್ತು ಕಾಶ್ಮೀರದಿಂದ. ಅಲ್ಲಿಯ ವಿಧ್ವಂಸಕ ವಾತಾವರಣದಿಂದ ಮಕ್ಕಳನ್ನ ಪಾರು ಮಾಡಿ ಅವರಿಗೆ ನೆಮ್ಮದಿಯ ನೆಲೆ ಕಲ್ಪಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ಗೃಹ ಖಾತೆ ಹಮ್ಮಿಕೊಂಡ ಕಾರ್ಯಕ್ರಮ ಒಂದರಲ್ಲಿ, ಮಿ. ಜಗನಾಥ್ ಅವರು ಈ ಮಕ್ಕಳನ್ನ ದತ್ತು ಪಡೆದಿದ್ರಂತೆ! ಆ ಮಕ್ಕಳೇನು ಅನಾಥರಲ್ಲ, ಅವರಿಗೂ ಹೆತ್ತವರಿದ್ರು. ಆದ್ರೆ ಈ ಭೂಪ ಭರ್ಜರಿ ದಾನ ಪಡೆಯೋ ಉದ್ದೇಶದಿಂದ ತಾನೇ ಅವರಿಗೆ 'ಅನಾಥರ' ಪಟ್ಟ ಕಟ್ಟಿದ್ದ. ಎಂಥಾ ಹಣೆಬರಹ ನೋಡಿ ಆ ಮಕ್ಕಳದ್ದು, ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ. ವರ್ಷಗಳೇ ಉರುಳಿದೆ ಈಗ. ಅವನು, ಆ ಮಕ್ಕಳು ಎಲ್ಲೆಲ್ಲಿದ್ದಾರೋ ಗೊತ್ತಿಲ್ಲ. ಅವ್ನ ಬಗ್ಗೆ ಆಸಕ್ತಿ ಇಲ್ಲ, ಆದ್ರೆ ಆ ಮಕ್ಕಳು ಅದೆಲ್ಲ ಕಹಿ ನೆನಪಿನಿಂದ ಹೊರಬರುವಂತಾಗಿರ್ಲಿ ಅನ್ನೋ ಮನದಾಳದ ಪ್ರಾರ್ಥನೆ. ಹಾಗೇ ಇವರೆಲ್ಲರ ಆಟಾಟೋಪ ಕಂಡೂ ಕಾಣದಂತೆ 'ನಾವಾಯ್ತು ನಮ್ಮ ಪಾಡಾಯ್ತು' ಅಂತಿರೋ ನಮ್ಮ ಜಡಭರತತನಕ್ಕೆ ಮಾಫಿ ಸಿಗಲೆಂಬ ಕೋರಿಕೆ ಕೂಡ. ಇದನ್ನ ಬರೆಯುವಷ್ಟೊತ್ತಿಗಾಗ್ಲೆ ನಿತ್ಯಾನಂದ ಮಹಾರಾಜ್ ಅವ್ರು ತಾವು ಮೆರೆಯೋದಲ್ಲದೆ ತಮ್ಮ ಮೇಣದ ಬೊಂಬೆನೂ ಮೆರೆಸಿ ಬಿಟ್ಟಿದ್ದಾರೆ... ಹೇಳಲಿಕ್ಕೆ ಇನ್ನೇನೂ ಉಳಿದಿಲ್ಲ.
ಓಂ ಶಾಂತಿ ಶಾಂತಿ ಶಾಂತಿಹಿ