Monday, June 27, 2011

ಈಶ ನಿನ್ನ ಚರಣ ಭಜನೆ ಆಶೆ ಇಂದ ಮಾಡುವೆನು...

     ಮೊದಲಿಗೆ ಹೇಳಿ ಬಿಡ್ತೀನಿ, ಇದು jolly reading ಗೆ suit ಆಗುವಂತಹ ಲೇಖನ ಅಲ್ಲವೇ ಅಲ್ಲ. ಇದು ಶುದ್ಧಾಂಗ ಹಲುಬುವಿಕೆ. ಬರೆಯಲೇ ಬೇಕೆಂಬ ಒಳಗಿನ ತುಡಿತನ ಹತ್ತಿಕ್ಕಲಾಗದೆ ಅಕ್ಷರವಾಗಿಸ್ತಿರೋ ಪ್ರಯತ್ನ. ಓದಿದ ನಂತರದ ಅಡ್ಡ ಪರಿಣಾಮಗಳಿಗೆ ನಾನು ಜವಾಬ್ದಾರಳಲ್ಲ ! Please think twice before you proceed N 

     ಮನಸನ್ನು ಮಾನಸ ಸರೋವರಕ್ಕೆ ಹೊಲಿಸುತ್ತಾರಾದ್ರು ನನಗ್ಯಾಕೋ ಮನಸ್ಸು ನದಿಯೆನ್ನಿಸ್ತಿದೆ! ಕೆಲವೊಮ್ಮೆ ಪ್ರಶಾಂತಿ, ಕೆಲವೊಮ್ಮೆ ಪ್ರವಾಹಿ; ಹಲವೊಮ್ಮೆ ಜಲಪಾತದ ಭೋರ್ಗರೆತವಿದ್ದರೆ ಉಳಿದಂತೆ ಗುಪ್ತಗಾಮಿನಿ...!!! ಕಳೆದ ಕೆಲವು ತಿಂಗಳುಗಳಿಂದ ಇಂತಹ ಚಂಚಲ ಮನಸ್ಸಿನ ಹೂಳೆತ್ತುವ ಕಾರ್ಯಕ್ರಮ ಜಾರಿಯಲ್ಲಿದೆ. ಅರೆರೆ ಹೂಳೆತ್ತೋದು ಬಾವಿ, ಕೆರೆ, ಕಾಲುವೆಗಳಲ್ಲಿ!! ನದಿಯಲ್ಲಿ...?? ನಂಗೂ ಆ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಮನಸ್ಸೆಂಬ ಜೀವಂತ ನದಿಯ ವಿಚಾರದಲ್ಲಿ ಆ ಪ್ರಯೋಗ ಅವಶ್ಯವಾಗಿ ಜರುಗಲೇ ಬೇಕೆಂಬುದು ನನ್ನ ಸಧ್ಯದ strong ಅಭಿಪ್ರಾಯ!! ಆದ್ರೆ ಹೂಳೆತ್ತಬೇಕು ಅಂದ್ರೆ ನದಿನ ಒಂದಷ್ಟು ಪ್ರಮಾಣದಲ್ಲಿ ಬತ್ತಿಸಲೇ ಬೇಕು. ಅದಕ್ಕಾಗಿಯೇ ಇತ್ತೀಚಿಗೆ ಅದರ ಚಲನಶೀಲತೆನ ತುಸು ಕುಗ್ಗಿಸಿ, ಮೌನವೆಂಬೋ ಬಟ್ಟಲಲ್ಲಿ ಸುರಿದಿಟ್ಟಿದ್ದೆ. ಇದೂ ಒಂಥರಾ ಅನನ್ಯ ಅನುಭವ! ನಮ್ಮೊಳಗಿನ ವಿಚಾರದ ಹರಿವಿಗೆ, ಮಾತಿನ ಪ್ರವಾಹಕ್ಕೆ ತಡೆಯೊಡ್ಡಿ, ಅದನ್ನ ಶೋಧಿಸುತ್ತಾ ಘನೀಭವಿಸುವ ಪ್ರಕ್ರಿಯೆ. ಒಂದರ್ಥದಲ್ಲಿ ಆತ್ಮವಿಮರ್ಶೆಯ ಪ್ರಯತ್ನ ಅಂತಲೂ ಎನ್ನಬಹುದು. ಒರಗಿ ಹಗುರಾಗಲು ಆತ್ಮೀಯರ ಹೆಗಲಿದ್ದಾಗಲು, ಕೊಡವಿ ಎದ್ದು ಹೊರಡಲು ಚಟುವಟಿಕೆಯ ಬದುಕಿದ್ದಾಗಲೂ, ಜಡತೆಯಲ್ಲದಂತಹ ಗಾಢ ಮೌನಕ್ಕೆ ಶರಣಾಗೋದು. ಮಾತಿನ ಬಗೆಗೆ ಒಂದು ಕುತೂಹಲ, ಎಚ್ಚರಿಕೆ ಬೆರೆತ ಗಂಭೀರ ನೋಟ! ಸಾಕಿಷ್ಟು. ಯಾಕಂದ್ರೆ ಮುಂದಿನದೇನಿದ್ರು ತೀರ ಖಾಸಗಿ ಅನುಭವ. ಅದನ್ನ ಅಕ್ಷರಕ್ಕಿಳಿಸೋ ವ್ಯರ್ಥ, ಮೂರ್ಖ ಪ್ರಯತ್ನ ಬೇಡ.

     ಇಂಥದ್ದೊಂದು ಪರೀಕ್ಷಾತ್ಮಕ ಘಟ್ಟದಲ್ಲಿ ತೀರ ಅಚಾನಕ್ಕಾಗಿ ಆದ್ರೆ ಅದ್ಬುತ ನಿಧಿಯಂತೆ ಸಿಕ್ಕಿದ ಕೀರ್ತನೆಯೊಂದನ್ನ ಹಂಚಿ ಕೊಳ್ಳಬೇಕೆನ್ನಿಸ್ತಿದೆ. ಕಾರಣ ಮತ್ತೇನಿಲ್ಲ ನಾನು ಮೊದಲ ಬಾರಿಗೆ ಕೇಳಿದಾಗಿನಿಂದ ಈ ಹೊತ್ತು ಕೇಳುವಾಗಲೂ ಅದು ನೀಡುವ ಅನುಭೂತಿ ಅವರ್ಣನೀಯ!!! ಅಂಥದ್ದೇ ಅನುಭವ ಉಳಿದ್ಯಾರ ಪಾಲಿಗಾದ್ರು ಸಿಗುವಂತಾದರೆ.... ಅನ್ನೋದಷ್ಟೇ ಈ ಬರವಣಿಗೆಯ ಉದ್ದೇಶ. ಯಾವುದೇ ವೇದಾಧ್ಯಯನ, ಶಾಸ್ತ್ರ - ಉಪನಿಷತ್ತುಗಳ ವಿದ್ವತ್ತಿಲ್ಲದೆ, ತನ್ನ ಅಕಳಂಕ ಭಕ್ತಿಯಿಂದ ಕೃಷ್ಣನನ್ನು ಒಲಿಸಿಕೊಂಡ ದಾಸ ಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ರಚನೆಯಿದು. ತಮ್ಮ ದೈವೀ ಕಂಠದಿಂದಲೇ ನಮ್ಮನ್ನ ಅಲೌಕಿಕ ಪ್ರಪಂಚಕ್ಕೊಯ್ಯುವ ನನ್ನ ಅತಿ ಪ್ರಿಯ ಗಾಯಕರಾದ ವಿದ್ವಾನ್ ವಿದ್ಯಾಭೂಷಣರ ( ನಾನವರನ್ನ ಸಂಬೋದಿಸೋದು ಗುರೂಜಿ ಅಂತ) ಗಾಯನ. ಸಾಹಿತ್ಯದಿಂದಾಗಿ ಗಾಯನ ಶ್ರೇಷ್ಠವಾಯಿತೋ, ಗಾಯನದಿಂದಾಗಿ ಸಾಹಿತ್ಯ ಪರಿಪೂರ್ಣವಾಯಿತೋ ಅಂತ ಬಿಡಿಸಿ ಹೇಳಲಾಗದ ultimate combination. ಸಾಕಿನ್ನು. ಇನ್ನೇನಿದ್ರೂ ನೀವು ಮತ್ತು ಅವರು...
Enjoy the bliss :-)1 comment:

  1. ishtavaguttade barahada layavooo badukina layavooo... nadi, sarovara hagu samudra jalapata ellavoo neerina harivugalee... baduku haage hariyuva anantha bhava...

    ReplyDelete